ವಿಶ್ವ ಯೋಗ ದಿನ ಬೇಲೂರಿನ ದೇಗುಲದ ಒಳ ಆವರಣದಲ್ಲಿ!

ಬೇಲೂರು : ಜೂನ್ ೨೧ ರಂದು ನಡೆಯುವ ವಿಶ್ವ ಯೋಗ ದಿನವನ್ನು ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲದ ಒಳ ಆವರಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಬೇಲೂರು ತಹಸೀಲ್ದಾರ್ ಮೋಹನಕುಮಾರ್ ತಿಳಿಸಿದರು.

ಬೇಲೂರು ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ವಿಶ್ವ ಯೋಗ ದಿನದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು

ತಾಲ್ಲೂಕು ಕಚೇರಿಯಲ್ಲಿ ನಡೆದ ವಿಶ್ವ ಯೋಗ ದಿನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿರವರು ದೇಶಕ್ಕೆ ಪ್ರಧಾನಿಯಾದ ಬಳಿಕ ನಮ್ಮ ನೆಲದ ಸಂಸ್ಕೃತಿ ಪ್ರತಿಬಿಂಬಿಸುವ ಯೋಗವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ದಿನವಾದ ಜೂನ್ ೨೧ ರಂದು ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಕಳೆದ ಎರಡು ವರ್ಷದ ಕೋವಿಡ್ ಹಿನ್ನಲ್ಲೆಯಲ್ಲಿ ಸ್ಥಗಿತವಾದ ಯೋಗ ದಿನ, ಪ್ರಸಕ್ತ ವರ್ಷದಲ್ಲಿ ಅರ್ಥಪೂರ್ಣ ಆಚರಣೆಗೆ ತಾಲ್ಲೂಕು ಆಡಳಿತ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ.

ಚನ್ನಕೇಶವ ದೇವಸ್ಥಾನ ಒಳಾಂಗಣದಲ್ಲಿ ೧೫೦೦ ಯೋಗ ಪಟುಗಳಿಂದ ಯೋಗ ದಿನಾಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ, ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಪಟ್ಟಣದ ೧೨ ಶಾಲೆಯಿಂದ ೧೨೦೦ ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮವಸ್ತ್ರ ಧರಿಸಿ ಆಗಮಿಸುತ್ತಾರೆ. ಉಳಿದಂತೆ ಎಲ್ಲಾ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ರಾಘವೇಂದ್ರ ಪತಂಜಲಿ ಯೋಗ ಕೇಂದ್ರದ ಯೋಗಪಟುಗಳು ಪಾಲ್ಗೊಳ್ಳಲಿದ್ದಾರೆ. ಯೋಗಾಪಟುಗಳಿಗೆ ಉಪಹಾರ ವ್ಯವಸ್ಥೆಯಿದೆ. ಯೋಗ ಏಕ ಪ್ರಕಾರದಲ್ಲಿ ಮೂಡಿ ಬರಲು ನುರಿತ ಯೋಗ ಪಟುಗಳಿಂದ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

   ರಾಘವೇಂದ್ರ ಯೋಗ ಕೇಂದ್ರದ ಮುಖ್ಯಸ್ಥ ಸುಬ್ಬಣ್ಣ ಮಾತನಾಡಿ, ಕಳೆದ ಎಂಟು ವರ್ಷದಿಂದ ವಿಶ್ವ ಯೋಗ ದಿನವನ್ನು ವಿದ್ಯಾರ್ಥಿಗಳನ್ನು ಒಳಗೊಂಡು ಅರ್ಥಪೂರ್ಣ ಅಚರಣೆ ಮಾಡಲಾಗುತ್ತದೆ. ಸದ್ಯ ತಾಲ್ಲೂಕು ಆಡಳಿತವೇ ಯೋಗ ದಿನಾಚರಣೆಗೆ ಮುಂದಾಗಿರುವುದು ನಮಗೆ ಅತೀವ ಸಂತೋಷವಾಗಿದ್ದು, ಈಗಾಗಲೇ ೭೦೦ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. 

   ದೈಹಿಕ ಪರವೀಕ್ಷಕ ಪಾಲಾಕ್ಷಮೂರ್ತಿ ಮಾತನಾಡಿ, ಯೋಗ ದಿನದ ಅಂಗವಾಗಿ ಸರ್ಕಾರದ ಶಿಷ್ಠಚಾರದಂತೆ ಪಟ್ಟಣದ ೧೩ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಅಯಾ ದೈಹಿಕ ಶಿಕ್ಷಕರು ಈಗಾಗಲೇ ತರಬೇತಿ ನೀಡಲಾಗಿದ್ದು, ಸ್ಥಳೀಯ ಯೋಗ ಪಟುಗಳ ಮಾರ್ಗದರ್ಶನ ಪಡೆಯಲಾಗುತ್ತದೆ ಎಂದರು. ಉಪ ತಹಸೀಲ್ದಾರ್ ಅಶೋಕ್, ಕೃಷ್ಣಮೂರ್ತಿ, ಪ್ರಕಾಶ್. ಮುಖ್ಯಾಧಿಕಾರಿ ಸುಜಯಕುಮಾರ, ನಾಗರಾಜು ಇನ್ನೂ ಮುಂತಾದವರು ಹಾಜರಿದ್ದರು.


Post a Comment

Previous Post Next Post