ಹಾಸನ : ಹಾಸನ ೧೬ನೇ ವಾರ್ಡಿನ ನಗರಸಭಾ ಸದಸ್ಯ ಪ್ರಶಾಂತ್ ನಾಗರಾಜ್ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ನಗರದ ಜವೇನಹಳ್ಳಿ ಮಠದ ಸಮೀಪ ಬುಧವಾರ ಸಂಜೆ ಪ್ರಶಾಂತ್ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.
ಪ್ರಶಾಂತ್ ನಾಗರಾಜ್ ಅವರ ೨ ಮುಂಗೈ ಗಳನ್ನು ಕತ್ತರಿಸಲಾಗಿದೆ. ಎದೆಭಾಗಕ್ಕೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಲಾಗಿದೆ. ವಿಷಯ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ಮಾಡುತ್ತಿದ್ದಾರೆ.
ಪ್ರಶಾಂತ್ ನಾಗರಾಜ್ ಬೈಕಿನಲ್ಲಿ ಹೋಗುತ್ತಿದ್ದಾಗ ಈ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇವರ ಹತ್ಯೆಗೆ ನಿಖರವಾದ ಕಾರಣ ತಿಳಿಸದು ಬಂದಿಲ್ಲ ಕೆಲವು ದಿನಗಳ ಹಿಂದಷ್ಟೇ ಪ್ರಶಾಂತ್ ನಾಗರಾಜ್ ಅವರ ಸಹೋದರ ಆತ್ಮ ಹತ್ಯೆ ಮಾಡಿಕೊಂಡಿದ್ದರು.
ಪ್ರಶಾಂತ್ ನಾಗರಾಜ್ ಅವರ ತಂದೆ ಹಾ.ರಾ. ನಾಗರಾಜ್ ಅಲಿಯಾಸ್ ಕಡ್ಡಿ ನಾಗ ಹಾಸನ ಜಿಲ್ಲಾ ಡಾ|| ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದರು.
ನಗರಸಭೆಯ ತುಂಡು ಜಮೀನೊಂದಕ್ಕೆ ಉಂಟಾದ ವಿವಾದದಿಂದ ಹಾರಾ ನಾಗರಾಜ್ ಕೊಲೆಯಾಗಿತ್ತು. ವಿವಾದಕ್ಕೆ ಸಂಬಂಧಪಟ್ಟಂತೆ ಎಸ್.ವಿ.ಎಂ ಶಾಲೆಯ ಮಾಲೀಕರಾದ ಗ್ಯಾರಳ್ಳಿ ತಮ್ಮಯ್ಯ ಅವರ ನಡುವೆ ಇದ್ದ ವೈಷಮ್ಯಕ್ಕೆ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದ ಬಳಿ ಗ್ಯಾರಳ್ಳಿ ತಮ್ಮಯ್ಯನವರ ಕೊಲೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾರಾ ನಾಗರಾಜ್ ಪುತ್ರರನ್ನು ಬಂಧಿಸಲಾಗಿತ್ತು.
ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾಗದ ಕಾರಣ ನಾಗರಾಜ್ ಪುತ್ರ ಪ್ರಶಾಂತ್ ನಾಗರಾಜ್ ಬಿಡುಗಡೆಯಾಗಿದ್ದರು. ನಂತರದ ದಿನಗಳಲ್ಲಿ ನಗರಸಭಾ ಚುನಾವಣೆಗೆ ಸ್ಪರ್ಧಿಸಿ ೧೬ನೇ ವಾರ್ಡಿನಿಂದ ಜಾತ್ಯಾತೀತ ಜನತಾ ದಳದಿಂದ ಆಯ್ಕೆಯಾಗಿದ್ದರು.
ಇತ್ತೀಚೆಗೆ ಹಾಸನ ನಗರದಲ್ಲಿ ರಕ್ತಸಿಕ್ತ ಅಧ್ಯಾಯ ಮತ್ತೆ ಮರುಕಳಿಸುತ್ತಿದೆ. ಕೊಲೆಯಾದ ಪ್ರಶಾಂತ್ ನಾಗರಾಜ್ ಅವರ ಪತ್ನಿ ಸೌಮ್ಯ ನಾಗರಾಜ್ ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.
ಈ ಕುರಿತು ಘಟನಾ ಸ್ಥಳದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಹಾಸನ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಶ್ರೀನಿವಾಸ್ ಗೌಡ ಅವರು ನಗರಸಭಾ ಸದಸ್ಯನ ಕೊಲೆಯಾಗಿದೆ. ಎಂದಿನಂತೆ ದ್ವಿ ಚಕ್ರವಾಹನದಲ್ಲಿ ಓಡಾಡುವ ಸ್ಥಳದಲ್ಲಿ ಹೊಂಚುಹಾಕಿ ದ್ವಿ ಚಕ್ರವಾಹನದ ಮೂಲಕ ಅಪಘಾತ ಮಾಡಿದ್ದಾರೆ.
ಅಪಘಾತದಿಂದ ಕೆಳಗೆ ಬಿದ್ದ ನಂತರ ಭೀಕರವಾಗಿ ಕೊಲೆ ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ಪ್ರಾರಂಭವಾಗಿದೆ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಘಟನೆ ನಡೆದ ಸ್ಥಳದಲ್ಲಿ ಕೊಲೆ ಪ್ರಕರಣವನ್ನು ವೀಕ್ಷಿಸಲು ಬಂದ ಜನರನ್ನು ಜನರನ್ನು ಮತ್ತು ಪ್ರಶಾಂತ್ ನಾಗರಾಜ್ ಅವರ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯಿತು.