ಅರಸೀಕೆರೆ: ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿ, ಕೆರೆಯಲ್ಲಿದ್ದ ಸಾವಿರಾರು ಮೀನು ಸಾವನ್ನಪ್ಪಿರುವ ಘಟನೆ ತಾಲೂಕಿನ ಮುದುಡಿ ಗ್ರಾಮದಲ್ಲಿ ನಡೆದಿದೆ.
ಯಾರೋ ಮಾಡಿದ ತಪ್ಪಿಗೆ ಮೂವತ್ತು ಸಾವಿರಕ್ಕೂ ಅಧಿಕ ಮೀನುಗಳ ಮಾರಣ ಹೋಮವಾಗಿದೆ ಎನ್ನಲಾಗಿದೆ. ಗುತ್ತಿಗೆದಾರರೊಬ್ಬರು ಮುದುಡಿ ಗ್ರಾಮದ ಹಿರಿಕೆರೆಯನ್ನು ಟೆಂಡರ್ ಪಡೆದು ಎರಡೂ ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ಬಿಟ್ಟಿದ್ದರು. ಮುದುಡಿ ತಾಂಡ್ಯ ಮತ್ತು ಹಲಗನಹಳ್ಳಿ ಗ್ರಾಮಸ್ಥರು ಗುತ್ತಿಗೆ ಪಡೆದು ಮೀನು ಸಾಕಾಣಿಕೆ ಮಾಡಿದ್ದರು. ಕಳೆದ ರಾತ್ರಿ ಕಿಡಿಗೇಡಿಗಳು ಕೆರೆ ನೀರಿಗೆ ವಿಷ ಹಾಕಿ, ನೀರಿನಲ್ಲಿದ್ದ ಮೀನು ಸೇರಿದಂತೆ ಎಲ್ಲ ಜಲಚರ ಸಾಯುವಂತೆ ಮಾಡಿದ್ದಾರೆ. ಸತ್ತಿರುವ ಮೀನುಗಳ ರಾಶಿ ನೀರಿನ ದಡದಲ್ಲಿ ತೇಲುತ್ತಿವೆ. ಸ್ಥಳಕ್ಕೆ ಗಂಡಸಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು. ಕೃತ್ಯ ಎಸಗಿರೋ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ನಮಗೆ ನ್ಯಾಯ ಕೊಡಿಸಬೇಕೆಂದು ಗುತ್ತಿಗೆದಾರರು ಮನವಿ ಮಾಡಿದ್ದಾರೆ.