ಚಿಕ್ಕ ತಿರುಪತಿ ವಿಗ್ರಹ ವಿರೂಪ ಪ್ರಕರಣ ಮೂವರ ಬಂದನ: ಅನ್ಯಧರ್ಮದವರು ಭಾಗಿಯಾಗಿಲ್ಲ ಎಸ್ ಶ್ರೀನಿವಾಸ್ ಗೌಡ

ಹಾಸನ: ಅರಸೀಕೆರೆ ತಾಲೋಕಿನ ​ ಚಿಕ್ಕ ತಿರುಪತಿಯಲ್ಲಿ ವಿಗ್ರಹ ವಿರೂಪ ಅನ್ಯಧರ್ಮದವರು ಭಾಗಿಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಅಮರಿಗಿರಿ ಮಾಲೇಕಲ್ಲು ತಿರುಪತಿ ದೇವಸ್ಥಾನದ ವೆಂಕಟಪುರಿ ಕಲ್ಯಾಣಿಯ ಪಕ್ಕ ನಿರ್ಮಾಣ ಹಂತದಲ್ಲಿದ್ದ ಶ್ರೀನಿವಾಸ ಪದ್ಮಾವತಿ ಕಲಾಕೃತಿಯ ಹಾನಿಗೊಳಿಸಿದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ. 

ಕಲಾಕೃತಿಗಳ ಮ್ಯುಸಿಯಂನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ನಾಲ್ವರು ಹುಡುಗರ ನಡುವೆ ಮೂರ್ನಾಲ್ಕು ಬಾರಿ ಗಲಾಟೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಇವರಲ್ಲಿ ಮೂವರನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಬಾಲಾಪರಾಧಿಗಳಾಗಿದ್ದಾರೆ. ಇನ್ನೊಬ್ಬ ಕಾರೇಹಳ್ಳಿ ಹಟ್ಟಿಯ ಆರೋಪಿ ಅಭಿಷೇಕ ನಾಯಕ್ (೨೦), ಎಂದು ತಿಳಿದುಬಂದಿದೆ. 

ಮತ್ತೊಬ್ಬ ಬಾಲಪರಾಧಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದರು. 

ಈ ನಾಲ್ವರು ಯುವಕರು ಪ್ರತಿನಿತ್ಯ ಕಲ್ಯಾಣಿಯಲ್ಲಿ ಈಜಾಡುತ್ತಿದ್ದರು.​ ಅದರಂತೆ ಮೇ.೩೦ರಂದು ತೆರಳಿದ ಸಂದರ್ಭದಲ್ಲಿ ಮ್ಯೂಸಿಯಂನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೂ ಮತ್ತು ಯುವಕರಿಗೂ ಸಂಘರ್ಷವಾಗಿದ್ದು, ಅದು ಅತಿರೇಕಕ್ಕೆ ತಿರುಗಿ, ಕಾರ್ಮಿಕರು ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಯುವಕರು ಮ್ಯೂಸಿಯಂನ ಒಳಗೆ ಅತಿಕ್ರಮವಾಗಿ ಪ್ರವೇಶಿಸಿ ೧೩ ವಿಗ್ರಹಗಳನ್ನು ವಿರೂಪಗೊಳಿಸಿದ್ದಾರೆ ಎಂದು​ ಮಾಹಿತಿ ನೀಡಿದರು.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಈ ಸತ್ಯಾಂಶ ಬಯಲಾಗಿದ್ದು, ಯಾವುದೇ ಧಾರ್ಮಿಕ ಹಿನ್ನೆಲೆಯಿಂದ​ ಕೃತ್ಯ ನಡೆದಿಲ್ಲ. ಈ ಪ್ರಕರಣದಲ್ಲಿ ಅನ್ಯಧರ್ಮದವರು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

 ಈ ಕಾರ್ಯಾಚರಣೆ ನೇತೃತ್ವವನ್ನು ಅರಸೀಕೆರೆ ಡಿವೈಸ್ಪಿ ಅಶೋಕ್, ವೃತ್ತ ನಿರೀಕ್ಷಕರಾದ ಕೆ.ಎಂ. ವಸಂತಕುಮಾರ್, ಪಿಎಸ್ಐಗಳಾದ ಲಕ್ಷ್ಮಣ್, ಅಭಿಜಿತ್, ಎಎಸ್ಐ ಯೋಗಾಂಬರಂ ಸೇರಿದಂತೆ ಪೊಲೀಸ್ ಸಿಬ್ಬಂದಿಗಳನ್ನು ಅಭಿನಂದಿಸಿದರು.

​ ​ ​ ​ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ ಇತರರು ಉಪಸ್ಥಿತರಿದ್ದರು.

Post a Comment

Previous Post Next Post