ಸಕಲೇಶಪುರ: ತಾಲೂಕಿನ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡೆಗಳ ಮೇಲೆ ಎಸಿ ಪ್ರತೀಕ್ ಬಾಯಲ್ ನೇತೃತ್ವದ ತಂಡ ಅಹೋರಾತ್ರಿ ಕಾರ್ಯಾಚರಣೆ ನಡೆಸಿದೆ.
ದಾಳಿ ವೇಳೆ ಅಪಾರ ಪ್ರಮಾಣದ ಮರಳು ಹಾಗೂ ಚಾಲಕರನ್ನ ವಶಕ್ಕೆ ಪಡೆಯಲಾಗಿದೆ. ತಾಲೂಕಿನ ಹಾಲೇ ಬೇಲೂರು,ಸುಳ್ಳಕ್ಕಿ ನಲ್ಲುಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ದಂಧೆ ನಡೆಸುತ್ತಿದ್ದರು. ಈ ಮಾಹಿತಿ ಆಧರಿಸಿ ರಾತ್ರಿಯಿಡೀ ಅಡ್ಡೆಗಳ ಮೇಲೆ ಉಪ ವಿಭಾಗಾಧಿಕಾರಿ ಪ್ರತೀಕ್ ಬಾಯಲ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಮೊದಲು ಇಬ್ಬರು ಟಿಪ್ಪರ್ ಚಾಲಕನನ್ನ ವಶಕ್ಕೆ ಪಡೆದು, ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಮರಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.
ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೂ ಎಸಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಮೂರು ಟಿಪ್ಪರ್, ಎರಡು ಇಟಾಚಿ, ಒಂದು ಕಾರು, ಒಂದು ಬೈಕ್, ಮರಳು ಎತ್ತಲು ಬಳಸುತ್ತಿದ್ದ ಮೋಟಾರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಕಲೇಶಪುರ ತಾಲೂಕಿನಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿ ಪ್ರತೀಕ್ ಬಾಯಲ್ ಪದೇ ಪದೇ ದಾಳಿ ನಡೆಸುವ ಮೂಲಕ ದಂಧೆಕೋರರಿಗೆ ಚಳಿ ಬಿಡಿಸುತ್ತಿದ್ದಾರೆ.