ಬೇಲೂರು : ಪ್ರಪಂಚದ ಭೂಪಟದಲ್ಲಿ ಶಿಲ್ಪಕಲೆಗೆ ತನ್ನದೇ ಹೆಸರು ಮಾಡಿರುವ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲದ ವಾಹನ ನಿಲುಗಡೆ ಸಮಸ್ಯೆ ಬಗೆಹರಿಯುವ ಲಕ್ಷಣ ಕಂಡುಬರುತ್ತಿಲ್ಲ.
![]() |
ಬೇಲೂರು ದೇಗುಲದ ಮುಂಭಾಗ ವಾಹನಗಳ ಬ್ಯಾರಿಕೇಡ್ ಮುಂಭಾಗ ನಿಂತಿರುವುದು ಮತ್ತು ವಾಹನ ನಿಲುಗಡೆಗೆ ಗುರುತುಪಡಿಸಿರುವ ದೇಗುಲದ ಹಿಂಭಾಗದಲ್ಲಿನ ವಾಹನ ನಿಲುಗಡೆಯ ಸ್ಥಳ |
ಬಹುಷಃ ಈ ಸಮಸ್ಯೆ ಯಾವುದಾದರೊಂದು ಬೃಹತ್ ಕಾಮಗಾರಿಗೆ ಸಂಬAಧಿಸಿದ್ದಾಗಿದ್ದರೆ ಬಹುತೇಕ ಮಂದಿ ಸಮಸ್ಯೆ ಬಗೆಹರಿಸಲು ನಾಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತಿದ್ದರು. ಆದರೆ ಈ ಪಾರ್ಕಿಂಗ್ ಸಮಸ್ಯೆ ಬಗೆಹರಿಸಿದರೆ ಯಾರಿಗಾದರೂ ಏನಾದರೂ ಲಾಭವಿದೆಯಾ? ಇದು ಎಲ್ಲರ ನಿರ್ಲಕ್ಷö್ಯಕ್ಕೆ ಕಾರಣ ಎನ್ನುತ್ತಾರೆ ಸಾರ್ವಜನಿಕರು.
ದೇಗುಲದ ಮುಂಭಾಗ ವಾಹನ ನಿಲುಗಡೆ ಸಮಸ್ಯೆ ಬಗೆಹರಿಸುವಂತೆ ಹಲವು ವರ್ಷಗಳಿಂದ ಒತ್ತಡ ಇದ್ದೇ ಇದೆ. ಪುರಸಭಯ ಅಧ್ಯಕ್ಷರಾಗಿದ್ದ ಜಿ.ಶಾಂತಕುಮಾರ್ ಅವರ ಅವಧಿಯಲ್ಲಿ ವಾಹನ ನಿಲುಗಡೆಗೆ ಶುಲ್ಕ ರದ್ಧುಗೊಳಿಸಿದ್ದರಿಂದ ಪ್ರವಾಸಿಗರು ತಮಗಿಷ್ಟವಾದ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದರು. ನಂತರದ ವರ್ಷದಲ್ಲಿ ದೇಗುಲದ ಆಡಳಿತ-ಅಧಿಕಾರಿಗಳು ದೇಗುಲಕ್ಕೆ ಆಧಾಯ ಕೊರತೆ ಕಾರಣ ನೀಡಿ ಪುನಃ ಹರಾಜು ಮೂಲಕ ಪಾರ್ಕಿಂಗ್ ಆರಂಬಿಸಿದರು. ಪರಿಣಾಮ ಈ ವರ್ಷ ೭೦ ಲಕ್ಷದ ಹತ್ತಿರ ದೇಗುಲಕ್ಕೆ ಆಧಾಯ ಬಂದಿದೆ.
ಆದರೆ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ದೇಗುಲದ ಅಧಿಕಾರಿಗಳು, ಆಡಳಿತ ತೀರಾ ನಿರಾಸಕ್ತಿ ತಾಳಿದೆ. ದೇಗುಲದ ಮುಂಭಾಗ ವಾಹನಗಳ ನಿಲುಗಡೆ ಮಾಡುವುದರಿಂದ ಇತರ ಸ್ಥಳೀಯರ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ನಡುವೆ ದೇಗುಲದಿಂದ ದೇಗುಲದ ಮುಂಭಾಗದ ಮೆಟ್ಟಿಲ ಬಳಿ ಬ್ಯಾರಿಕೇಡ್ ಇಟ್ಟಿರುವುದರಿಂದ ಇನ್ನಷ್ಟು ಅಡ್ಡಿಯಾಗಿದೆ. ಪರಿಣಾಮ ಪ್ರವಾಸಿಗರು ವಾಹನಗಳ ನಿಲ್ಲಿಸಲು ಸ್ಥಳಾವಕಾಶ ಇಲ್ಲದೆ ದೇಗುಲ ರಸ್ತೆಯ ಗಣಪತಿ ದೇಗುಲದಿಂದಲೂ ರಸ್ತೆಯ ಬದಿಯಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಹರಾಜು ಕೂಗಿರುವ ವ್ಯಕ್ತಿಗಳಿಗೆ ಶುಲ್ಕ ವಸೂಲಿಗೆ ಅನಾನುಕೂಲವಾಗುತ್ತಿದೆ.
ಇದೀಗ ದೇಗುಲದ ಅಧಿಕಾರಿಗಳು ಹರಾಜುದಾರರಿಗೆ ದೇವಾಲಯದ ಹಿಂಭಾಗದಲ್ಲಿ ವಾಹನ ನಿಲುಗಡೆಗೆ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಸೂಚಿಸಿರುವ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಪ್ರವಾಸಿಗರು ದೇಗುಲದ ಹಿಂಭಾಗಕ್ಕೆ ಹೋಗಲು ನಿರಾಸಕ್ತಿ ತೋರುತ್ತಿದ್ದಾರೆ ಮತ್ತು ದೇಗುಲದ ಮುಂಭಾಗ ಸ್ಥಳೀಯರು ವಾಹನಗಳನ್ನು ನಿಲುಗಡೆ ಮಾಡುವುದರಿಂದ ಪ್ರವಾಸಿಗರೂ ಸಹ ಇಲ್ಲಿಯೇ ವಾಹನ ನಿಲ್ಲಿಸುತ್ತಾರೆ, ಇದು ಇನ್ನಷ್ಟು ಸಮಸ್ಯೆಯಾಗಿದೆ ಎನ್ನುವುದು ಹರಾಜು ಕೂಗಿದವರ ಅಳಲು.
ಈ ಕಾರಣದಿಂದ ಇದೀಗ ಹರಾಜು ಕೂಗಿದ ವ್ಯಕ್ತಿ ಸಮಸ್ಯೆ ಎಲ್ಲವನ್ನು ಉಲ್ಲೇಖಿಸಿ, ಹರಾಜು ರದ್ಧುಪಡಿಸುವಂತೆ ಮನವಿ ಪತ್ರವನ್ನು ದೇಗುಲದ ಅಧಿಕಾರಿಗಳಿಗೆ ನೀಡಿದ್ದಾರೆ. ಹತ್ತಾರು ವರ್ಷದಿಂದಿರುವ ದೇಗುಲದ ಮುಂಭಾಗದ ವಾಹನ ನಿಲುಗಡೆ ಸಮಸ್ಯೆ ಇತ್ತೀಚಗೆ ಬಂದಿರುವ ದೇಗುಲದ ವ್ಯವಸ್ಥಾಪನ ಸಮಿತಿ ಹೇಗೆ ಬಗೆಹರಿಸುತ್ತದೆ ಕಾದುನೋಡಬೇಕಿದೆ.
-----------------
ಅಧಿಕಾರಿ ಹೇಳಿಕೆ
--------------
ಸುದ್ದಿಗಾರರೊಂದಿಗೆ ಮಾತನಾಡಿದ ದೇಗುಲದ ಕಾರ್ಯನಿರ್ವಾಹಕಾಧಿಕಾರಿ ವಿದ್ಯುಲ್ಲತಾ, ಸಮಸ್ಯೆ ಅರಿವಿಗೆ ಬಂದಿದೆ. ನಾವು ಹರಾಜು ನೀಡುವಾಗ ದೇಗುಲದ ಹಿಂಭಾಗದಲ್ಲಿ ವಾಹನ ನಿಲುಗಡೆ ಮಾಡುವಂತೆ ತಿಳಿಸಿಯೇ ನೀಡಿದ್ದೇವೆ. ಆದರೆ ಹರಾಜು ಕೂಗಿದವರು ದೇಗುಲದ ಮುಂಭಾಗವೆ ವಾಹನಗಳ ನಿಲ್ಲಿಸಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಸೋಮವಾರ ವ್ಯವಸ್ಥಾಪನ ಸಮಿತಿ ಸಭೆ ಕರೆದಿದ್ದು ಸಭೆಯಲ್ಲಿ ಸಮಿತಿಯವರು ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದರು.
ಲೇಖನ : ಅನಂತರಾಜೇಅರಸು, ಬೇಲೂರು