4 ದಿನಗಳಲ್ಲಿ ಹೇಮೆಗೆ 3 ಅಡಿ ನೀರು

ಹಾಸನ: ಚಿಕ್ಕಮಗಳೂರು, ಸಕಲೇಶಪುರ ಮೊದಲಾ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವನದಿ ಜೀವಕಳೆ ಬರುತ್ತಿದೆ. ಹೌದು ಕಳೆದ ಮೂರು ದಿನಗಳ ಅಂತರದಲ್ಲಿ ಜಲಾಶಯಕ್ಕೆ 3.02 ಅಡಿ ನೀರು ಹರಿದು ಬಂದಿದ್ದು, ಇಷ್ಟು ದಿನಗಳ ಅವಧಿಯಲ್ಲಿ 2.289 ಟಿಎಂಸಿ ನೀರು ಸಂಗ್ರಹವಾಗಿದೆ. 2922 ಅಡಿ ಗರಿಷ್ಠ ನೀರಿನ ಮಟ್ಟದ ಜಲಾಶಯದಲ್ಲಿ ಕಳೆದ ಜು.3 ರಂದು 2908.83(25.810 ಟಿಎಂಸಿ) ಅಡಿ ನೀರಿತ್ತು. ಅಂದು ಒಳ ಹರಿವು 4688 ಕ್ಯುಸೆಕ್ ಇತ್ತು.
ಜು.4 ರಂದು 2909.49 ಅಡಿಗೇರಿತು.(26.298 ಟಿಎಂಸಿ) ಒಳ ಹರಿವು 5934 ಕ್ಯುಸೆಕ್ ಇತ್ತು. ಜು.5 ರಂದು ಒಳ ಹರಿವು 9464 ಕ್ಯುಸೆಕ್‌ಗೇರಿ ನೀರಿನ ಮಟ್ಟ 2910.54 ಅಡಿ ತಲುಪಿದರೆ(27.090 ಟಿಎಂಸಿ) 
ಇಂದು ನೀರಿನ ಮಟ್ಟ 2911.85(28.099 ಟಿಎಂಸಿ) ಅಡಿಗೆ ಏರಿಕೆ ಕಂಡಿದೆ. ಒಳಹರಿವು 11,969 ಕ್ಯುಸೆಕ್ ಇದೆ. ಜಲಾಶಯ ಭರ್ತಿಗೆ ಕೇವಲ 10 ಅಡಿ ಬಾಕಿ ಇದ್ದು, ಮಳೆ ಹೀಗೆಯೇ ಮುಂದುವರಿದರೆ ಹೇಮೆಯ ಒಡಲು ಆದಷ್ಟು ಶೀಘ್ರ ಭರ್ತಿಯಾಗಲಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2896.10 ಅಡಿ ಮಾತ್ರ ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐದು ಮುಕ್ಕಾಲು ಅಡಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿರುವುದು ಹೇಮೆ ನಂಬಿರುವ ಲಕ್ಷಾಂತರ ಜನ, ಜಾನುವಾರುಗಳಲ್ಲಿ ಅತೀವ ಸಂತಸ ತರಿಸಿದೆ.
ಮುಂದುವರಿದ ಮಳೆ:
ಇನ್ನು ಹಾಸನ ನಗರ ವ್ಯಾಪ್ತಿಯಲ್ಲಿ ಕೊಂಚ ಬಿಡುವು ನೀಡಿ, ನಂತರದ ಸಮಯದಲ್ಲಿ ಮಳೆ ಜೋರಾಗಿದೆ. ಇದರಿಂದ ಜನ ಜೀವನ ಪರದಾಡುವಂತಾಗಿದೆ.ಹಾಗೆಯೇ ಜಿಲ್ಲೆಯ ಹಲವು ಕಡೆಗಳಲ್ಲಿ ವರ್ಷಧಾರೆ ಜೋರಾಗಿದೆ. ಅದರಲ್ಲೂ ಆಲೂರು, ಸಕಲೇಶಪುರ, ಬೇಲೂರು, ಅರಕಲಗೂಡು ಮೊದಲಾದ ಕಡೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಕೆಲವು ಕಡೆ ಜೋರು ಮಳೆಗೆ ಮರ ಮುರಿದು ಬಿದ್ದು ಸಂಚಾರಕ್ಕೆ ವ್ಯತ್ಯೆಯ ಉಂಟಾಗಿದೆ. ಮತ್ತೆ ಕೆಲವೆಡೆ ವಿದ್ಯುತ್ ಕಂಬ ಮುರಿದು ತೊಂದರೆಯಾಗಿದೆ.

Post a Comment

Previous Post Next Post