ಹಾಸನ: ಬರೋಬ್ಬರಿ 4 ವರ್ಷ 1 ತಿಂಗಳ ಕಾಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದ ಡಾ.ಕೆ.ಎಂ. ಸತೀಶ್ ಕುಮಾರ್ ಅವರು ಜಿಲ್ಲೆಯಿಂದ ವರ್ಗವಾಗಿದ್ದಾರೆ. ಇವರ ಸ್ಥಾನಕ್ಕೆ ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ಬಿ.ಎನ್.ಶಿವಸ್ವಾಮಿ ಅವರನ್ನು ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೂಲತಃ ಜಿಲ್ಲೆಯವರೇ ಆಗಿರುವ ಡಾ. ಸತೀಶ್ ಕುಮಾರ್, 2018 ಜೂನ್ 14 ರಂದು ಡಿಹೆಚ್‌ಒ ಆಗಿ ನಿಯೋಜನೆಗೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎಲ್ಲಾ ರೀತಿಯಲ್ಲೂ ಸುಧಾರಣೆ ತರಲು ಸಾಕಷ್ಟು ಶ್ರಮಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದರು. ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಚಿಕಿತ್ಸೆ ನೀಡಿದ್ದರು.
ಕೊರೊನಾ ವೇಳೆ ಗಮನಾರ್ಹ ಕೆಲಸ:
ಸತೀಶ್ ಅವರು ಡಿಹೆಚ್‌ಒ ಆಗಿದ್ದ ವೇಳೆಯಲ್ಲೇ ಒಂದಲ್ಲ, ಎರಡಲ್ಲ ಕೊರೊನಾ ಮೂರಲೇ ಅಲೆ ಅತಿಯಾಗಿ ಬಾಧಿಸಿ, ಅಪಾರ ಸಾವು-ನೋವಿಗೆ ಕಾರಣವಾಗಿತ್ತು. ಈ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿದ್ದರು. ಹಿಂದಿನ ಅನುಭವದ ಆಧಾರದ ಮೇಲೆ ನಾಲ್ಕನೇ ಅಲೆ ಎದುರಿಸಲು ಸಶಕ್ತ ರೀತಿಯಲ್ಲಿ ಸಜ್ಜಾಗಿದ್ದರು.
ಜಿಲ್ಲೆಯಲ್ಲೂ ಕೊರೊನಾ ಮಹಾಮಾರಿ, ವಿಷಮಿಸಿದ ಸಂದರ್ಭದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ
ಇಡೀ ತಂಡವನ್ನು ಕಟ್ಟಿಕೊಂಡು ಹಗಲು-ರಾತ್ರಿ ಕೆಲಸ ಮಾಡಿದ್ದರು. ಒಮ್ಮೆ ಕೊರೊನಾ ಪಾಸಿಟಿವ್‌ಗೂ ತುತ್ತಾಗಿದ್ದರೂ ಎದೆಗುಂದದೆ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ಜಿಲ್ಲೆಯನ್ನು ಸುತ್ತಾಡಿದ್ದರು.
24*7 ಮಾದರಿಯಲ್ಲಿ ನಗರ, ಜಿಲ್ಲೆ ಹಾಗೂ ಗಡಿ ಭಾಗಗಳಲ್ಲಿ ಕೆಲಸ ನಿರ್ವಹಿಸಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತಮ್ಮದೇ ಶ್ರಮ ಹಾಕಿದ್ದರು. ಕೊರೊನಾ ಬಗ್ಗೆ ಜಾಗೃತಿ, ಮಾಸ್ಕ್, ಸ್ಯಾನಿಟೈಸರ್, ಔಷಧಿ ಕಿಟ್ ವಿತರಣೆ ಹಾಗೂ ಇಡೀ ರಾಜ್ಯದಲ್ಲೇ ಹಾಸನ ಜಿಲ್ಲೆ ಕೊರೊನಾ ಲಸಿಕೆ ನೀಡಿಕೆಯಲ್ಲಿ ಉತ್ತಮ ಸಾಧನೆ ಮಾಡಲು ಡಾ.ಸತೀಶ್ ಅವರ ಪರಿಶ್ರಮ ಅಡಗಿದೆ ಎಂಬುದು ಈಗಲೂ ಕೇಳಿ ಬರುತ್ತಿರುವ ಮಾತಾಗಿದೆ.
ಸದಾ ನಗುಮೊಗದ, ಹೃದಯವಂತಿಕೆಯ ಗುಣವುಳ್ಳ ಡಾ.ಸತೀಶ್ ಅವರು, ಯಾರೇ ಸಂಕಷ್ಟ ಎಂದು ಬಂದರೂ ಸದಾ ಸ್ಪಂದಿಸಿದ್ದರು. ಇದೇ ಕಾರಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೊರೊನಾ ಅಲ್ಲದೆ ಡೆಂಗ್ಯು, ಚಿಕೂನ್‌ಗುನ್ಯಾ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದರು.
ಚಿಕಿತ್ಸಾ ಕೇಂದ್ರಗಳು ಮೇಲ್ದರ್ಜೆಗೆ:
ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಡಿಹೆಚ್‌ಒ ಆಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಸತೀಶ್ ಅವರ ಅವಧಿಯಲ್ಲಿ ಜಿಲ್ಲಾ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಿವೆ. ಶಸ್ತçಚಿಕಿತ್ಸೆ, 24*7 ಮಾದಿಯಲ್ಲಿ ಆರೋಗ್ಯ ಸೇವೆ ಎಲ್ಲಾ ಕಡೆಗಳಲ್ಲೂ ಸಿಗುತ್ತಿವೆ. ಇದರಿಂದ ಗ್ರಾಮೀಣ ಜನರು ಹಾಗೂ ಬಡವರ್ಗದವರು ಸಾಕಷ್ಟು ಅನುಕೂಲವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕೊರೊನಾ ಮೊದಲ ಮತ್ತು 2ನೆ ಅಲೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ದಿನಕ್ಕೆ
ಹತ್ತಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಇವರೇ ಪಿಪಿಇ ಕಿಟ್ ಧರಿಸಿ ಮುಂದೆ ಎಷ್ಟೋ ಮೃತದೇಹಗಳಿಗೆ ಅಂತ್ಯಕ್ರಿಯೆ ನೆರವೇರಿಸುವ ಕೆಲಸ ಮಾಡಿದ್ದರು.
Tags
ಹಾಸನ