ಹಾಸನ:- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮುಖಂಡರೊಂದಿಗೆ ದುರ್ವರ್ತನೆ ತೋರಿದ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರ ನಡೆಯನ್ನು ಖಂಡಿಸಿ ಜುಲೈ 18 ರ ಸೋಮವಾರ ಬೆಳಗ್ಗೆ 11.30 ಕ್ಕೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಎದುರು 'ಖಂಡನಾ ಸಭೆ ನಡೆಸಲು ಸಿಐಟಿಯು ತೀರ್ಮಾನಿಸಿದೆ ಎಂದು ಸಿ ಐ ಟಿ ಯು ನ ಸದಸ್ಯರು ತಿಳಿಸಿದ್ದಾರೆ .
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಳೆನರಸಿಪುರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಜುಲೈ 13 ರಂದು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ನೇತೃತ್ವದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅನಪೇಕ್ಷಿತ ಭೇಟಿ ನೀಡಿದ ಹೊಳೆನರಸಿಪುರ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವರಾದ ಎಚ್.ಡಿ. ರೇವಣ್ಣ ಅವರು ಪ್ರತಿಭಟನಾ ನಿರತರು ಮಹಿಳೆಯರು ಎನ್ನುವುದನ್ನೂ ಪರಿಗಣಿಸದೆ ಅನುಚಿತವಾಗಿ ವರ್ತಿಸಿ, ಹೋರಾಟಗಾರರನ್ನು ಏಕವಚನದಲ್ಲಿ ನಿಂದಿಸಿ, ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ನಡೆಯುವ ಹೋರಾಟಗಳನ್ನು ದಮನ ಮಾಡುವ ದುರ್ವರ್ತನೆಯನ್ನು ಅತ್ಯಂತ ತೀವ್ರವಾಗಿ ಖಂಡಿಸಿದರು.
ತನ್ನ ಕ್ಷೇತ್ರದಲ್ಲಿ ಜನರು ನ್ಯಾಯ ಕೇಳಿ ಪ್ರತಿಭಟನೆ ಧರಣಿ ನಡೆಸುವುದು ತಪ್ಪು ಎಂದು ವಿರೋಧಿಸುವ ಎಚ್. ಡಿ. ರೇವಣ್ಣನವರು ಅವರಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಸಮರ್ಪಕವಾಗಿ ಹಣ ಬಿಡುಗಡೆ ಆಗದಿದ್ದಾಗಲೆಲ್ಲಾ 'ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡುತ್ತೇನೆ' ಎಂದು ಏಕೆ ಹೇಳಿಕೆ ಕೊಡುತ್ತಾರೆ ಎಂದು ಪ್ರಶ್ನಿಸಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಅಂಗನವಾಡಿ ನೌಕರರಿಗೆ ವಿನಾಕಾರಣ ತೊಂದರೆಗಳನ್ನು ಕೊಟ್ಟರೆ ಮುಂದೆ ರಾಜಕೀಯವಾಗಿ ಭಾರೀ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂಗನವಾಡಿಗಳ ಮಹಿಳಾ ನೌಕರರು ಮತ್ತು ಹೋರಾಟಗಾರರ ವಿರುದ್ಧ ಅನುಚಿತವಾಗಿ ವರ್ತಿಸಿರುವ ಕುರಿತು ಶಾಸಕ ಎಚ್.ಡಿ. ರೇವಣ್ಣ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಹಾಗೂ ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಅನ್ಯಾಕ್ಕೊಳಗಾಗಿರುವ ಅವರದೇ ಕ್ಷೇತ್ರದ ಮತದರಾರೂ ಆಗಿರುವ ಅಂಗನವಾಡಿ ನೌಕರರ ಪರವಾಗಿ ನಿಂತು ಅವರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರ ದುರ್ವರ್ತನೆಯ ವಿರುದ್ಧ ಜುಲೈ 18 ರ ಸೋಮವಾರ ಬೆಳಗ್ಗೆ 11.30 ಕ್ಕೆ ಹಾಸನದ ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಎದುರು 'ಖಂಡನಾ ಸಭೆ' ನಡೆಸಲಾಗುವುದು ಈ ಖಂಡನಾ ಸಭೆಗೆ ಜಿಲ್ಲೆಯ ಎಲ್ಲಾ ಜನಪರ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ಭಾಗವಹಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ. ಪುಷ್ಪ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಇಂದಿರಮ್ಮ, ಡಿವೈಎಫ಼್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ಕುಮಾರ್, ಹೊಳೆನರಸಿಪುರ ತಾಲ್ಲೂಕು ಡಿಎಚ್ಎಸ್ ಸಂಚಾಲಕ ರಾಜು ಸಿಗರನಹಳ್ಳಿ, ಹೊಳೆನರಸಿಪುರ ತಾಲ್ಲೂಕು ಸಿಐಟಿಯು ಮುಖಂಡರಾದ ಮಲ್ಲಿಕಾರ್ಜುನ ಇದ್ದರು.
Tags
ಹಾಸನ