ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳ ಗಮನಕ್ಕೆ :
ಶಿರಾಡಿ ಘಾಟ್ ಸಂಪೂರ್ಣ ಬಂದ್. ಪರ್ಯಾಯವಾಗಿ ಮಡಿಕೇರಿ ಘಾಟ್ ಬಳಕೆ.
ನಾಲ್ಕು ವರ್ಷಗಳಿಂದ ಯಾವುದೇ ಸಮಸ್ಯೆ ಇಲ್ಲದ ಶಿರಾಡಿ ಘಾಟಿ ಹೆದ್ದಾರಿ ಸಂಚಾರ ಮತ್ತೆ ಸ್ತಬ್ಧಗೊಂಡಿದೆ. ಹಾಸನ ಜಿಲ್ಲಾ ವ್ಯಾಪ್ತಿಯ ದೋಣಿಗಲ್‌ನಲ್ಲಿ ಭೂಕುಸಿತವಾದ ಬಳಿಕ ಅಲ್ಲಿನ ಜಿಲ್ಲಾಡಳಿತ ಹೊರಡಿಸಿದ ಆದೇಶದ ಪ್ರಕಾರ ಶಿರಾಡಿ ಘಾಟಿಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ತಡೆಹಿಡಿಯಲಾಗಿದೆ.
2018ರ ಬೇಸಿಗೆಯಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಶಿರಾಡಿ ಘಾಟಿ ಹೆದ್ದಾರಿಯ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದ್ದಾಗ 6 ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅದೇ ವರ್ಷದ ಜುಲೈನಲ್ಲಿ ಸಂಚಾರ ಪುನಾರಂಭಗೊಂಡಿತ್ತು. ಇದಾದ ಬಳಿಕ ಸಮಸ್ಯೆ ಇರಲಿಲ್ಲ. 3 ದಿನಗಳ ಹಿಂದೆ ಹಾಸನ ಜಿಲ್ಲಾ ವ್ಯಾಪ್ತಿಯ ದೋಣಿಗಲ್ ಬಳಿ ಕುಸಿತ ಉಂಟಾದ ಕಾರಣ ಮೊದಲು ಭಾಗಶಃ ನಿರ್ಬಂಧ ಹೇರಿದ್ದ ಹಾಸನ ಜಿಲ್ಲಾಡಳಿತ, ಶುಕ್ರವಾರದಿಂದ ಸಂಪೂರ್ಣ ನಿರ್ಬಂಧ ವಿಧಿಸಿದೆ.
ಗುರುವಾರ ಮತ್ತು ಶುಕ್ರವಾರ ಮಂಗಳೂರು ಕಡೆಯಿಂದ ಹಾಸನ ಮೂಲಕ ತೆರಳುವ ವಾಹನಗಳು ಗುಂಡ್ಯದಿಂದ ಶಿರಾಡಿ ಮೂಲಕ ಸಾಗಿ ಸಕಲೇಶಪುರ ಪೊಲೀಸ್ ಠಾಣೆಯ ಪಕ್ಕದ ರಸ್ತೆಗೆ ಕವಲೊಡೆದು ಕಾಡುಮನೆ ರಸ್ತೆಯ ಮೂಲಕ ಸಾಗಿ ಹಾರ್ಲೆ ಕೂಡಿಗೆ ಎಂಬಲ್ಲಿ ಮತ್ತೆ ಹೆದ್ದಾರಿ ಸೇರಿ ಮುಂದುವರಿಯುತ್ತಿದ್ದವು. ದೊಡ್ಡತಪ್ಪಲು ಪ್ರದೇಶದಿಂದಲೂ ಹಾರ್ಲೆ ಕೂಡಿಗೆ ಸಂಪರ್ಕಿಸಿ ಮತ್ತೆ ಹೆದ್ದಾರಿ ಸೇರಿಕೊಳ್ಳುತ್ತಿದ್ದವು. ಬೆಂಗಳೂರು ಕಡೆಯಿಂದ ಬರುವ ವಾಹನಗಳು ಅರಕಲಗೂಡು, ಕುಶಾಲನಗರ, ಮಡಿಕೇರಿ, ಸಂಪಾಜೆ, ಪುತ್ತೂರು ಮೂಲಕ ಬರುತ್ತಿದ್ದವು.
ಶುಕ್ರವಾರ ರಾತ್ರಿಯೂ ಇದೇ ವಿಧಾನ ಮುಂದುವರಿದ್ದು, ಶನಿವಾರ ಬೆಳಗ್ಗೆ 7 ಗಂಟೆಯಿಂದ ಇದಕ್ಕೂ ಕಡಿವಾಣ ಹಾಕಲಾಗಿದೆ. ಗುಂಡ್ಯ ಚೆಕ್‌ಪೋಸ್ಟ್‌ನಲ್ಲೇ ಎಲ್ಲ ವಾಹನಗಳನ್ನು ತಡೆದು ಶಿರಾಡಿ ಘಾಟಿ ಸಂಚಾರ ಸ್ಥಗಿತಗೊಂಡಿರುವ ಮಾಹಿತಿಯನ್ನು ಚಾಲಕರಿಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದ ಶಿರಾಡಿ ಘಾಟಿ ಸಂಪೂರ್ಣ ಸ್ತಬ್ಧಗೊಂಡಿದೆ. ಆದರೆ ಮಾಹಿತಿ ಇಲ್ಲದ ವಾಹನಗಳು ಗುಂಡ್ಯ ಚೆಕ್‌ಪೋಸ್ಟ್‌ವರೆಗೆ ಹೋಗಿ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
Tags
ರಾಜ್ಯ