ಜಗದ ಅನಾಥ ಪ್ರಜ್ಞೆಗೆ ತಾಯಿಯಾಗು... ತಾಯಿಯಾಗುವುದೆಂದರೆ ಎಂಬ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಬಂದ ಒಂದು ಸಂಭಾಷಣೆ. ಕೃಷ್ಣಮೂರ್ತಿ ಕವತ್ತಾರ್ ಅವರ ನಿರ್ದೇಶನದಲ್ಲಿ ಪೂಜಾ ರಘುನಂದನ್ ಅಭಿನಯಿಸಿದ ಈ ಏಕವ್ಯಕ್ತಿ ರಂಗಪ್ರಯೋಗಕ್ಕೆ ತುಂಬಿ ತುಳುಕಿದ ಹಾಸನಾಂಭ ಕಲಾಕ್ಷೇತ್ರ ಸಾಕ್ಷಿಯಾಯಿತು. ತಾಯಿ ಎಂಬ ಭಾವವನ್ನು ಯಾವ ರೀತಿಯಾಗಿ ದುಡಿಸಿಕೊಂಡಿರಬಹುದು ಎಂಬ ಕುತೂಹಲದಿಂದ ಬಂದ ಪ್ರೇಕ್ಷಕರೇ ಹೆಚ್ಚಿದ್ದರು. ಅದಷ್ಟೂ ಜನ ನಾಟಕದಲ್ಲಿರುವ ಮಾನವೀಯ ಸಂವೇದನೆಯ ಕಾರಣಕ್ಕಾಗಿ ಕಭನಿ ಮಿಡಿದರು. ತಾಯಿಯಾಗುವ ಹಂಬಲ, ಆಗಲಾಗದ ಸಂಕಟ, ತಾಯಿಯಾಗಲು ಸಿಗುವ ದಾರಿಯೊಂದರ ಬೆಳಕು ಎಲ್ಲವನ್ನು ಈ ನಾಟಕದಲ್ಲಿ ಸಂಪೂರ್ಣ ಎನ್ನುವ ರೀತಿಯಲ್ಲಿ ತರಲು ಸಾಧ್ಯವಾಗಿದ್ದೇ ಇದರ ಯಶಸ್ಸಿಗೆ ಕಾರಣ.
ಒಂದು ಗಂಟೆಯ ಕಾಲ ತುಂಬಿದ ಕಲಾಕ್ಷೇತ್ರದ ಜನರನ್ನು ಅತ್ತಿತ್ತ ನೋಡಲು ಬಿಡದಂತೆ ಅಭಿನಯ ನೀಡಿದ ಪೂಜಾರವರ ಅಭಿನಯ ವ್ಯಾಪಕ ಮೆಚ್ಚುಗೆಗೆ ಕಾರಣವಾಯಿತು. ಒಂದೊಂದು ಭಾವವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಹಾಸದ ರಂಗಾಸಕ್ತರಿಗೆ ಪೂಜಾ ಅಭಿನಯ ಸೊಬಗು ಹೊಸದೇನಲ್ಲ. ಆದರೆ ಇಲ್ಲಿ ಪರಿಪೂರ್ಣ ಎನ್ನುವಂತಹಾ ಪೂಜ ಎಂಬ ನಟಿ ನಿಚ್ಚಳವಾಗಿ ಕಾಣಿಸಿದಳು. ಇಂತಹಾ ಒಂದು ಭರವಸೆ ಯಾವುದೇ ಕ್ಷೇತ್ರಕ್ಕಾದರೂ ಹೆಮ್ಮೆಯ ವಿಚಾರ. ಇಡೀ ರಂಗವನ್ನು ಬಳಸಿಕೊಳ್ಳುತ್ತಾ, ಪ್ರತಿಯೊಂದು ಭಾವವನ್ನು ಅನುಭವಿಸುತ್ತಾ ಪ್ರತಿ ಹಂತದಲ್ಲೂ ಆ ಭಾವವನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಪೂಜಾ ಸಂಪೂರ್ಣ ಯಶಸ್ವಿಯಾದರು. ಇದು ಅವರ ರಂಗಜೀವನದ ಮೈಲಿಗಲ್ಲು. ಹಾಸನಾಂಬ ಕಲಾಕ್ಷೇತ್ರ ಈ ನಾಟಕದ ಕಾರಣಕ್ಕೆ ಕಣ್ಣೀರಿನಿಂದ, ಆನಂದ ಬಾಷ್ಪದಿಂದ ತೋಯ್ದಷ್ಟು ಬೇರಾವುದೇ ಪ್ರಯೋಗದಲ್ಲಿ ಮಿಂದಿರುವುದು ಕಾಣಲಿಲ್ಲ. ಇಂತಹಾ ನಿಷ್ಕಲ್ಮಶವಾದ ಭಾವದ ಕಣ್ಣೀರು ಆಯಾ ಜಾಗವನ್ನು ಪವಿತ್ರವಾಗಿಸುತ್ತದೆ. ಅಂತಹುದೇ ಒಂದು ಪವಿತ್ರ ಕಾರ್ಯ ’ತಾಯಿಯಾಗುವುದೆಂದರೆ’ ನಾಟಕದ ಮೂಲಕ ಆಯಿತು ಎಂದರೆ ಅತಿಶಯೋಕ್ತಿಯಲ್ಲ.
ಈ ನಾಟಕವನ್ನು ಎಲ್ಲಿಯೂ ಅತೀ ಅನಿಸದ ಹಾಗೆ, ತುಂಬಾ ಸೂಕ್ಷ್ಮ ವಿಚಾರಗಳನ್ನು ಜನರಿಗೆ ಮುಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟವರು ಕೃಷ್ಣಮೂರ್ತಿ ಕವತ್ತಾರ್. ಕೃಷ್ಣಮೂರ್ತಿ ಕವತ್ತಾರ್ ಅವರು ಈ ನಾಡು ಕಂಡ ಪ್ರತಿಭಾವಂತ ರಂಗಕರ್ಮಿಗಳಲ್ಲಿ ಒಬ್ಬರು. ಮೂವತ್ತೈದು ವರ್ಷಗಳಿಂದಲೂ ರಂಗಭೂಮಿಯನ್ನೇ ತನ್ನ ಕಾರ್ಯಕ್ಷೇತ್ರ ಮಾಡಿಕೊಂಡ ಕೃಷ್ಣಮೂರ್ತಿ ಕವತ್ತಾರರ ಅನುಭವ ಹಾಗು ರಂಗಕ್ಕೆ ಬೇಕಾದ ನಿರಂತರ ಪ್ರಯೋಗಶೀಲತೆ ಈ ನಾಟಕಕ್ಕೆ ಸಾಕಷ್ಟು ಸಹಕಾರಿಯಾಯಿತು. ಏಕವ್ಯಕ್ತಿ ರಂಗಪ್ರಯೋಗ ಎಂದರೆ ಅದೊಂದು ಅಂದರ್ ಬಾಹರ್ ಆಟವಿದ್ದಂತೆ. ಒಮ್ಮೆ ರಂಗದ ಮೇಲಿನ ನಟಿ ಅಥವಾ ನಟ ಪ್ರೇಕ್ಷಕರನ್ನು ಆಚೀಚೆ ನೋಡಲು ಬಿಟ್ಟರೆ ಅಲ್ಲಿಗೆ ನಾಟಕ ನಿಂತು ಹೋಯಿತೆಂದೇ ಅರ್ಥ. ಅಂತಹಾ ಯಾವುದೇ ಒಂದು ಸಣ್ಣ ಸಾಧ್ಯತೆಯೂ ಇಲ್ಲದಂತೆ ಒಂದು ನಾಟಕವನ್ನು ಕಟ್ಟುವಲ್ಲಿ ಕೆಲಸ ಮಾಡಬೇಕಾದವರು ನಿರ್ದೇಶಕರು. ಅದಕ್ಕೆ ಒಂದು ಚೌಕಟ್ಟು, ಫ್ರೇಮ್ ಹಾಕಬೇಕಾದವರು ನಿರ್ದೇಶಕರು. ಆ ಚೌಕಟ್ಟು ಸ್ವಲ್ಪ ಆಚೀಚೆ ಆದರೂ ಸಂದೇಶ ಬೇರೆಯದೇ ರೀತಿಯಾಗಿಬಿಡುತ್ತದೆ.
ಮೊದಲ ದೃಶ್ಯದಿಂದ ಹಿಡಿದ ಕಡೆಯ ದೃಶ್ಯದ ತನಕ ಹೆಣಿಗೆಯಲ್ಲಿ ಒಂದು ಚೂರು ವ್ಯತ್ಯಾಸವಾಗದಂತೆ ನಿರ್ದೆಶಕರು ದುಡಿದ ಫಲಿತಾಂಶ ಅಲ್ಲಿ ಎದ್ದು ಕಾಣುತ್ತಿತ್ತು. ಹಾಸನದ ಜನರ ಮನಸ್ಸಿನಲ್ಲಿ ತಮ್ಮದೇ ಛಾಪನ್ನು ಮೂಡಿಸಿಬಿಟ್ಟರು ಕವತ್ತಾರರು.
ಸಂಗೀತ ಒಂದು ನಾಟಕಕ್ಕೆ ಎಷ್ಟು ಹದವಾಗಿರಬೇಕು ಎಂಬುದಕ್ಕೂ ಈ ನಾಟಕ ಅತ್ಯುತ್ತಮ ಉದಾಹರಣೆಯಾಗಬಹುದು. ಎಲ್ಲೂ ಅಬ್ಬರವಿಲ್ಲದ, ಎಲ್ಲಿ ಎಷ್ಟು ಆಲಾಪದ ಝರಿ ಬೇಕೋ ಅಷ್ಟು ಮಾತ್ರ ಮೇಳದ ಕಡೆಯಿಂದ ರಂಗಕ್ಕೆ ತೂರಿ ಬರುತ್ತಿದ್ದುದು ಮಾಂತ್ರಿಕ ಸ್ಪರ್ಷ ನೀಡಿದಂತಿತ್ತು. ಸಿಂದುಶ್ರಿ ಆತ್ರೇಯ ಎಂಬ ಪ್ರತಿಭೆಯು ತನ್ನ ಸಾಮರ್ಥ್ಯವನ್ನು ತೋರಿಸಲು ಸಹ ಈ ನಾಟಕ ಸಹಕಾರಿಯಾಯಿತು. ಮೇಳದಲ್ಲಿ ಖುದ್ದು ಕವತ್ತಾರರೇ ಕುಳಿತಿದ್ದ ಕಾರಣಕ್ಕೆ ಅವರ ರಂಗಾಲಾಪ ಕಲಾಕ್ಷೇತ್ರದ ತುಂಬೆಲ್ಲಾ ಸಂಚಲನ ಮೂಡಿಸಿತು. ಕೀಬೋರ್ಡ್ ಮೊದಲ ಬಾರಿಗೆ ಎಷ್ಟು ಬೇಕೋ ಅಷ್ಟರ ಮಟ್ಟಿಗೆ ನಿಗ್ರಹ ವಹಿಸಿತ್ತು. ಅದ್ಬುತ ಕೀಬೋರ್ಡ್ ಪ್ರವೀಣ ಎನಿಸಿಕೊಂಡ ರಘುನಂದನ್ ಅವರ ಸಮಯ ಪ್ರಜ್ಞೆ ನಾಟಕಕ್ಕೆ ಪೂರಕವಾಗಿತ್ತು.
ಪ್ರದೀಪ್ ಎಂಬ ಪ್ರತಿಭಾವಂತ ಬೆಳಕಿನ ವಿನ್ಯಾಸಕ್ಕೆ ಎಷ್ಟು ತಯ್ಯಾರಿ ಮಾಡಿಕೊಂಡಿದ್ದರು ಎಂಬುದು ರಂಗದ ಮೇಲೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ರಂಗದ ಮೇಲಿನ ಅದಷ್ಟೂ ಜಾಗವನ್ನು ಇಂಚಿಂಚೂ ಬೆಳಕಿನಿಂದ ವಿನ್ಯಾಸ ಮಾಡಿದ್ದು ವಾಹ್ ಎನಿಸುವಂತಿತ್ತು. ಬ್ಲಾಕಿಂಗ್ ಸಮಸ್ಯೆಯೋ ಏನೋ ಎಂಬಂತೆ ಒಂದಷ್ಟು ಹೊಂದಾಣಿಕೆ ಕಾಣಿಸದಿದ್ದರೂ ನಾಟಕಕ್ಕೆ ಅದರಿಂದ ಯಾವ ಹಾನಿಯೂ ಆಗಲಿಲ್ಲ. ಬದಲಿಗೆ ಬೆಳಕು ರಂಗಕ್ಕೆ ಎಷ್ಟು ಮುಖ್ಯ ಎಂಬುದನ್ನು ಕತ್ತಲೆಯ ಮಹತ್ವದ ಮೂಲಕ ಹೇಳಿದಂತಿತ್ತು. ಇಂತಹಾ ಕ್ರಿಯಾಶೀಲ ಬೆಳಕಿನ ಸಂಯೋಜಕನೊಬ್ಬ ಹಾಸನದಲ್ಲಿ ಇರುವ ತನಕ ಸಮರ್ಪಕವಾಗಿ ಬಳಸಿಕೊಳ್ಳುವುದು ಹಾಸನದ ರಂಗಭೂಮಿಗೆ ಬಿಟ್ಟ ವಿಚಾರ.
ನಾಟಕ ಮುಗಿದ ನಂತರ ಪ್ರೇಕ್ಷಕರ ಮಾತುಗಳು ಕಟ್ಟಿ ಹೋಗಿದ್ದವು. ದತ್ತು ವಿಚಾರವನ್ನು ಸರ್ಕಾರಿ ಡಾಕ್ಯೂಮೆಂಟರಿಯಂತೆ ಮಾಡಿದರೆ ಇಂತಹಾ ಅದ್ಬುತ ಸೃಷ್ಟಿಯಾಗುತ್ತಿರಲಿಲ್ಲ. ತಾಯಿಯಾಗುವ ಹಾದಿಯಲ್ಲಿ ಇರುವ ಹಲವಾರು ಹಾದಿಗಳಲ್ಲಿ ಅದೂ ಕೂಡ ಒಂದು ಎಂಬುದನ್ನು ಮನಗಾಣಿಸುವಲ್ಲಿ ಪ್ರಯೋಗದ ಯಶಸ್ಸು ಅಡಗಿತ್ತು.
ನಾವೆಲ್ಲಾ ಅನಾಥ ಮಗುವಿಗೆ ಜೀವನ ನೀಡಿದೆವು ಎಂಬ ಭಾವಕ್ಕಿಂತ ಒಬ್ಬ ಅನಾಥೆ ಹೆಣ್ಣಿಗೆ, ಅನಾಥ ಗಂಡಿಗೆ ಅಪ್ಪ, ಅಮ್ಮ ಆಗುವ ಸದವಕಾಶ ಒದಗಿಸುವ ಮಹತ್ವದ ಪ್ರಕ್ರಿಯೆ ಇದು ಎಂಬುದನ್ನು ತೋರಿಸಿಕೊಟ್ಟದ್ದು ಈ ನಾಟಕದ ನಿಜದ ಹೆಚ್ಚುಗಾರಿಕೆ.
ಇಂತಹಾ ಒಂದು ನಾಟಕವನ್ನು ನಾಡಿಗೆ ನೀಡಿದ ರಂಗಹೃದಯ ತಂಡ ನಿಜಕ್ಕೂ ಅಭಿನಂದನೆಗೆ ಅರ್ಹರು. ಇಂತಹಾ ರಂಗಸಾಹಸಗಳು ಮತ್ತಷ್ಟು ಬರುತ್ತಿರಲಿ. ಪೂಜಾಳಂತಹಾ ರಂಗಾಸಕ್ತರು ಜನರ ಬಾಯಲ್ಲಿ ಅಭಿನಯ ಶಾರದೆ ಎನಿಸಿಕೊಳ್ಳುವ ಅದ್ಬುತಗಳು ಘಟಿಸುತ್ತಲೇ ಇರಲಿ ಎಂಬ ಆಶಯ ರಂಗಾಸಕ್ತರದ್ದು.