ಹಾಸನ: ಈ ಜಿಲ್ಲೆಯಲ್ಲಿ ಹೆಚ್.ಡಿ.ದೇವೇಗೌಡರು ಹಾಗೂ ಅವರ ಕುಟುಂಬ ಬಿಟ್ಟು ಯಾರು ರಾಜಕಾರಣ ಮಾಡುವುದಕ್ಕೆ ಆಗುವುದಿಲ್ಲ ಎಂದು ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ ಹೇಳಿದರು.
ನಗರದ ದೇವಿಗೆರೆಯ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾರ್ಚ್ ತಿಂಗಳಿನಿಂದ ನಾನು ಇಲ್ಲಿನ ಅಧಿಕಾರವಹಿಸಿಕೊಂಡಿದ್ದೀನಿ, ನನ್ನ ಕಾರ್ಯವ್ಯಾಪ್ತಿಯಲ್ಲಿ ಜವಾಬ್ದಾರಿ ಇದೆ. ಕಾರ್ಯಕರ್ತರನ್ನು ಪ್ರೋತ್ಸಾಹಿಸಿ, ಪಕ್ಷ ಸಂಘಟನೆ ಮಾಡುತ್ತೇನೆ. ಹಾಸನ ತಾಲ್ಲೂಕನ್ನು ನೂಡಲ್ ತಾಲ್ಲೂಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಮತ್ತೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕ ಆಯ್ಕೆಯಾಗಬೇಕು. ನಿಟ್ಟಿನಲ್ಲಿ ಕೆಲಸ ಮಾಡುವ ಜವಾಬ್ದಾರಿ ನನ್ನದು ಎಂದರು. ಅವರಿಗೆ, ಇವರಿಗೆ ಟಿಕೆಟ್ ಕೊಡಿ ಅಂತ ಹೇಳಲು ನಾನು ಯಾವ ಹೈಕಮಾಂಡ್ ಅಲ್ಲ. ಹಾಸನ ತಾಲ್ಲೂಕಿಗೆ ಕಳಂಕ ಬಂದಿರುವುದು ಇಡೀ ಜಿಲ್ಲೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಅದನ್ನು ಅಳಿಸಬೇಕು, ಅದನ್ನು ಅಳಿಸಲು ನಮ್ಮ ಕಾರ್ಯಕರ್ತರ ಜೊತೆ ಸೇರಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕರ್ತರ ಅಭಿಪ್ರಾಯ ಏನಿದೆ ಎಂಬುದನ್ನು ದೇವೇಗೌಡರು, ಕುಮಾರಸ್ವಾಮಿ, ಜಿಲ್ಲೆಯ ಶಾಸಕರ ಗಮನಕ್ಕೆ ತರುತ್ತೇನೆ. ಆಮೇಲೆ ಹಾಸನಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂದು ನಿರ್ಧಾರ ಮಾಡುತ್ತೇವೆ. ಶಾಸಕರುಗಳಾದ ಕೆ.ಎಂ. ಶಿವಲಿಂಗೇಗೌಡ ಮತ್ತು ಎ.ಟಿ. ರಾಮಸ್ವಾಮಿ ಪಕ್ಷ ಬಿಡುವ ವಿಚಾರವಾಗಿ ಮಾತನಾಡಿದ ಅವರು, ನನಗೆ ಇನ್ನೂ ಹೆಚ್ಚಿನ ವಿಶ್ವಾಸವಿದೆ, ಇಬ್ಬರು ಶಾಸಕರು ಎಲ್ಲೂ ಹೋಗಲ್ಲ. ಮುಂದೆ 2023ರ ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳಲ್ಲಿ ಬರುವ ಚುನಾವಣೆಯಲ್ಲಿ ಇದೇ ಹಾಲಿ ಶಾಸಕರು ಸ್ಪರ್ಧೆ ಮಾಡಿ ಜೆಡಿಎಸ್ ನಿಂದಲೇ ಜಯಭೇರಿ ಬಾರಿಸುತ್ತಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಳೆಯಿಂದ ಕಾಫಿ, ಭತ್ತ, ಜೋಳ ನಾಶವಾಗಿ ರೈತರಿಗೆ ಅನಾನುಕೂಲ ಪರಿಸ್ಥಿತಿ ಇದೆ. ಬೆಳೆ ನಷ್ಟದ ಬಗ್ಗೆ ವರದಿ ಕೊಡಲು ಆರ್‌ಐ, ವಿಐಗಳಿಗೆ ಸೂಚನೆ ಕೊಡಿ ಎಂದು ಎಲ್ಲಾ ತಹಸೀಲ್ದಾರ್‌ಗಳಿಗೆ ಹೇಳಿದ್ದೇನೆ.
ಪಕ್ಷಾತೀತವಾಗಿ ಕೆಲಸ ಮಾಡಿ ಅಂಥ ಹೇಳಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮಾಧ್ಯಮ ವಕ್ತಾರ ಹೊಂಗೆರೆ ರಘು ಇದ್ದರು.
Tags
ಹಾಸನ