ಮುಂಬೈ: ನಿಖಿಲ್ ಸಿದ್ಧಾರ್ಥ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಕಾರ್ತಿಕೇಯ 2 ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ಚಿತ್ರದ ಯಶಸ್ಸನ್ನು ಆಚರಿಸುವ ಗುಂಗಿನಲ್ಲಿದ್ದರೆ, ನಟಿ ಅನುಪಮಾ ಪರಮೇಶ್ವರನ್ ಅವರಿಗೆ ದುರದೃಷ್ಟವಶಾತ್ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅನುಪಮಾ ಅವರು ಕಾರ್ತಿಕೇಯ 2ರ ಪ್ರಚಾರದ ಭಾಗವಾಗಿ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಸುದೀರ್ಘ ಪ್ರವಾಸದಲ್ಲಿ ತೊಡಗಿದ್ದರು. ಆದಾಗ್ಯೂ, ಅವರು ತಮ್ಮ ಪ್ರಚಾರಗಳನ್ನು ಮುಗಿಸಿದ ಸುಮಾರು ಒಂದು ವಾರದ ನಂತರ, ಶೀತ ಮತ್ತು ಕೆಮ್ಮಿನಂತಹ ರೋಗಲಕ್ಷಣಗಳನ್ನು ಹೊಂದಲು ಪ್ರಾರಂಭಿಸಿದ್ದರು.
ಹೀಗಾಗಿ ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.
ಪ್ರಚಾರ ಸಮಯದಲ್ಲಿ ನಿಯಮಿತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪಾಲ್ಗೊಂಡಿದ್ದಾಗ ಅವರಿಗೆ ವೈರಸ್ ತಗುಲಿದೆ ಎಂದು ವರದಿಯಾಗಿದೆ. ಸದ್ಯ ಅನುಪಮಾ ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.