ಓಟ್ ಬ್ಯಾಂಕ್ ರಾಜಕಾರಣದ ಕಾರಣದಿಂದಾಗಿ ಜೈನರಿಗೆ ಏನು ಬೇಕಾದರೂ ಮಾಡಬಹುದು ಎನ್ನುವ ಮನೋಭಾವ ಬಹುತೇಕವಾಗಿ ಈಗಿನ ರಾಜಕಾರಣಿಗಳಿಗೆ ಇದೆಯೆಂದು ಸ್ಪಷ್ಟವಾಗುತ್ತದೆ.
#ಧಾರ್ಮಿಕ_ಭಾವನೆಯೊಡನೆ_ಆಟವಾಡಬೇಡಿ
ಗೋಮಟೇಶ್ವರರಿಗಿಂತಲೂ ಅತೀ ದೊಡ್ಡ ಕೆಂಪೇಗೌಡ ಪ್ರತಿಮೆ ಮಾಡುತ್ತೇವೆ - ಮುನಿರತ್ನ
ಶ್ರವಣಬೆಳಗೊಳ ಶ್ರೀಗಳ ಅಂತಿಮ ಯಾತ್ರೆಯಲ್ಲಿ ಬಹುತೇಕ ರಾಜಕಾರಣಿಗಳ ಗೈರಿನ ಮೂಲಕ ಅಸಡ್ಡೆ
ಭೇಷ್ ಮುನಿರತ್ನರವರೇ ಭೇಷ್ ನಿಮ್ಮ ಸಾಧನೆಗಳನ್ನು ಮೆಚ್ಚೋಣ, ಖಂಡಿತ ಮನುಷ್ಯ ದೊಡ್ಡ ದೊಡ್ಡ ಸಾಧನೆ ಮಾಡಬೇಕು ನಿಜ. ಆದರೆ ಆ ಸಾಧನೆಯನ್ನು ಮತ್ತೊಂದು ಧಾರ್ಮಿಕರ ಭಾವನೆಗಳಿಗೆ ಹೋಲಿಕೆ ಮಾಡಿ ದೊಡ್ಡ ಸಾಧನೆ ಮಾಡುತ್ತೇನೆಂದು ಬೀಗುವ ನಿಮ್ಮ ಕುತ್ಸಿತ ಮನೋಭಾವಕ್ಕೆ ಧಿಕ್ಕಾರವಿದೆ.
ನಿಮಗೆ ಏನು ಗೊತ್ತಿದೆರೀ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಪ್ರತಿಮೆಯ ಬಗ್ಗೆ. ಒಂದು ಸಾವಿರ ವರ್ಷಕ್ಕಿಂತಲೂ ಹಳೆಯದಾದ , ಏಕಶಿಲೆಯ ವಿಗ್ರಹ, ಸರ್ವ ಋತುಗಳನ್ನೂ , ಪ್ರಾಕೃತಿಕ ವೈಪರೀತ್ಯಗಳನ್ನು ಎದುರಿಸಿ ಜಗತ್ತಿಗೆ ತ್ಯಾಗ ವೈರಾಗ್ಯದ ಸಂದೇಶವನ್ನು ಸಾರುತ್ತಿರುವ ಆ ಅನುಪಮ ಅದ್ವಿತೀಯ ಮೂರ್ತಿಗೆ ಬೆಲೆ ಕಟ್ಟಲು ಹೊರಟಿರುವ ನಿಮ್ಮ ವಿಕೃತ ಮನೋಭಾವಕ್ಕೆ ನನ್ನ ಧಿಕ್ಕಾರವಿದೆ.
ಇಡೀಯ ಪ್ರಪಂಚಕ್ಕೆ ಭಗವಾನ್ ಬಾಹುಬಲಿಯ ಮೂರ್ತಿ ವಿಸ್ಮಯ ಕೌತುಕದ ಮೂರ್ತಿಯಾಗಿದೆ. ಆಧುನಿಕತೆಯ ಲವಲೇಶವೂ ಇಲ್ಲದ ಅಂದಿನ ಅರಸೊತ್ತಿಗೆಯ ಕಾಲದಲ್ಲಿ ನಿರ್ಮಾಣಗೊಂಡ ಆ ಬೃಹತ್ ಮೂರ್ತಿಯ ನಿರ್ಮಾಣವೇ ಒಂದು ಸೋಜಿಗ.
ಕೆಂಪೇಗೌಡರ ಚರಿತ್ರೆಯನ್ನು ಓದಿ ಬೆಳೆದವರು ನಾವು. ಅವರು ಮಾಡಿರುವಂತಹ ಸಾಧನೆ ಅಜರಾಮರ. ಅಂತಹಾ ಉನ್ನತ ವ್ಯಕ್ತಿಯ ಗಗನಚುಂಬಿ ಪ್ರತಿಮೆ ಮಾಡುವುದಾದರೆ ಕನ್ನಡಿಗರಾದ ನಮಗೆ ಹೆಮ್ಮೆಯ ವಿಚಾರವಾಗಿದೆ.
ಆದರೆ ಅದನ್ನು ಅದರಲ್ಲೂ ಪರಮೋಚ್ಛ ಸಂದೇಶವನ್ನು ಜಗದಗಲ ಸಾರುತ್ತಿರುವ ತ್ಯಾಗ ವೈರಾಗ್ಯವನ್ನು ಪ್ರತಿನಿಧಿಸುತ್ತಿರುವ ಧಾರ್ಮಿಕ ಪ್ರತೀಕವಾಗಿರುವ ಮೂರ್ತಿಗೆ ಹೋಲಿಕೆ ಮಾಡುವ ಮೂರ್ಖತನ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿರುವ ಜೈನ ಧರ್ಮೀಯರ ಭಾವನೆಗಳಿಗೆ ಕುಂದನ್ನು ಉಂಟು ಮಾಡಿರುವ ಮುನಿರತ್ನರವರು ಜೈನ ಸಮಾಜದ ಕ್ಷಮೆಯನ್ನು ಕೇಳಬೇಕು.
ಶ್ರವಣಬೆಳಗೊಳ ಶ್ರೀಗಳ ಅಂತಿಮ ಯಾತ್ರೆಯಲ್ಲೂ ಮುಖ್ಯಮಂತ್ರಿಗಳಾದಿಯಾಗಿ ರಾಜಕೀಯ ನಾಯಕರುಗಳು ಪಾಲ್ಗೊಳ್ಳದೇ ಅಸಡ್ಡೆ ತೋರಿದ್ದಾರೆ. ಇದು ಶ್ರವಣಬೆಳಗೊಳ ಕ್ಷೇತ್ರದ ಒಬ್ಬ ಪರಿಚಾರಕನಿಗೆ ಮಾಡಿದ ಅವಮಾನ ಜೊತೆಗೆ ಜೈನ ಸಮಾಜಕ್ಕೆ ಅಭದ್ರತೆಯನ್ನು ಉಂಟು ಮಾಡುವಂತಹ ಪ್ರಸಂಗವಾಗಿದೆ.