ಬೇಲೂರು ರಥೋತ್ಸವದಲ್ಲಿ ಕುರಾನ್ ಪಠಣ: ಹಿಂದಿನ ಪದ್ಧತಿ ಮುಂದುವರಿಯುತ್ತದೆ ಎಂದ ಜಿಲ್ಲಾಡಳಿತ.

ಹಾಸನ: ರಾಜ್ಯದ ಐತಿಹಾಸಿಕ ದೇವಾಲಯ ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಪಠಣ ಮಾಡದಂತೆ ಜಿಲ್ಲಾ ವಿವಿಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೃಹತ್  ಪ್ರತಿಭಟನೆ ನಡೆಸಿ ಆಗ್ರಹಿಸಿದ್ದು, ಈ ಬಗ್ಗೆ ಹಾಸನ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಪಠಣ ಇದು ಹೊಸದಾಗಿ ಸೃಷ್ಟಿಯಾಗಿರುವಂತದ್ದಲ್ಲ, 1929 ರಿಂದ ಈ ಪದ್ದತಿ ನಡೆಯುತ್ತಿದೆ. ರಥೋತ್ಸವ ಆಚರಣೆ ಪದ್ಧತಿಯಲ್ಲಿ ಅದು ಸೇರಿದೆ. ರಥೋತ್ಸವದ ದಿನ ಮೌಲ್ವಿಗಳು ಬಂದು ಮುಜ್ರೆ ಸರ್ವಿಸ್ ಅಂತಾ ಮಾಡುತ್ತಾರೆ ಅದು 1929 ರಿಂದ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.
ಕಳೆದ ವರ್ಷ ಇದೇ ತರಹ ವಿವಾದವಾಗಿತ್ತು, ಆ ಬಗ್ಗೆ ಮುಜರಾಯಿ ಇಲಾಖೆಗೆ ಸ್ಪಷ್ಟನೆ ಕೇಳಿದ್ದೆವು. ಹಿಂದಿನ ಪದ್ದತಿ ಏನು ನಡೆದುಕೊಂಡು ಬಂದಿದೆ ಅದನ್ನು ಬದಲಾವಣೆ ಮಾಡೋದು ಬೇಡ ಅಂತ ಹೇಳಿದ್ದರು. ಅದರಂತೆ ಕಳೆದ ವರ್ಷ ಪದ್ಧತಿ ಪ್ರಕಾರ ನಡೆದುಕೊಂಡು ಹೋಗಿದೆ. ಈ ವರ್ಷ ಮತ್ತೆ ಪದ್ಧತಿ ಬದಲಾಯಿಸಿ ಅಂತ ಕೇಳಿದ್ದಾರೆ. ದಿಢೀರ್ ಎಂದು ಇಂತಹ ಪದ್ಧತಿಗಳನ್ನು ಬದಲಾವಣೆ ಮಾಡಲು ಆಗಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದೆವು ಎಂದು ಹೇಳಿದರು.
ಈ ಬಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆ ವೇಳೆ ಯಾರೋ ಒಬ್ಬ ಯುವಕ ಘೋಷಣೆ ಕೂಗಿದ ಎನ್ನುವ ಕಾರಣಕ್ಕೆ ಘರ್ಷಣೆ ಶುರುವಾಗಿದೆ, ತಕ್ಷಣಕ್ಕೆ ಪೊಲೀಸರು ಕಂಟ್ರೋಲ್ ಮಾಡಿದ್ದಾರೆ. ಆಮೇಲೆ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ ಅದನ್ನು ಸದ್ಯಕ್ಕೆ ಸರಿಪಡಿಸಲಾಗಿದೆ. ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲು ಆಗಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಇಲ್ಲಿನ ಪರಿಸ್ಥಿತಿ ಏನಿದೆ ಎಂದು ಮುಜರಾಯಿ ಇಲಾಖೆಗೂ ತಿಳಿಸಿದ್ದೇವೆ. ಪರಿಸ್ಥಿತಿ ಏನು ಎಂದು ತಿಳಿದುಕೊಳ್ಳಲು ಆಗಮ ಪಂಡಿತರು ಬರುತ್ತಿದ್ದಾರೆ. ಅವರು ಬಂದು ವರದಿ ಕೊಟ್ಟ ನಂತರ ಚರ್ಚೆ ಮಾಡುತ್ತೇವೆ. ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುವ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.
ಶ್ರೀ ಚನ್ನಕೇಶವ ದೇವಸ್ಥಾನದ ಆಡಳಿತ ಅಧಿಕಾರಿ ಯಾರು, ಪದ್ಧತಿ ಹಿಂದಿನಿಂದ ಇರುವುದು ನಿಜ. ಆದರೆ ಅವರು ಮೇಲಾಧಿಕಾರಿಗಳ ಜೊತೆ ಚರ್ಚೆ ಮಾಡದೆ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಪದ್ಧತಿ ಇರುವುದು ಮೆಟ್ಟಿಲ ಮೇಲೆ ನಿಂತು ಕುರಾನ್ ಪಠಣ ಮಾಡುವಂತಹದ್ದು, ಅವರು ಹೇಳಿದ್ದು ನಿಜ. ರಥದ ಮುಂದೆ ಕುರಾನ್ ಪಠಣ ಮಾಡುವ ಪದ್ಧತಿ ಇರಲಿಲ್ಲ. ದೇವಸ್ಥಾನ ಮೆಟ್ಟಿಲ ಮೇಲೆ ಕುರಾನ್ ಪಠಣ ಮಾಡುವ ಪದ್ಧತಿ ಇತ್ತು ಎಂದರು.
ಇನ್ನು ಕಳೆದ ನಾಲ್ಕೈದು ವರ್ಷದಿಂದ ರಥದ ಮುಂದೆ ಬಂದು ಕುರಾನ್ ಪಠಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಐದು ವರ್ಷಕ್ಕಿಂತ ಮುಂಚೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಿಂತು ಕುರಾನ್ ಪಠಣ ಮಾಡುವ ಪದ್ಧತಿ ಇತ್ತು. ಹೀಗಾಗಿ ಅದನ್ನೇ ಮುಂದುವರಿಸುವಂತೆ ಸೂಚನೆ ಕೊಟ್ಟಿದ್ದೇವೆ. ಮುಜರಾರಿಯ ಇಲಾಖೆಯ ಆಗಮ ಪಂಡಿತರು ಬರುತ್ತಿದ್ದಾರೆ. ಮ್ಯಾನುಯಲ್ ಇವತ್ತು, ನಿನ್ನೆ ಕುಳಿತು ಬರೆದಿರುವುದಲ್ಲ, ಇದರ ಬಗ್ಗೆ ದಾಖಲೆಗಳಿವೆ. ಈ ಸಮಯದಲ್ಲಿ ನಾವೇ ನಿರ್ಧಾರ ತೆಗೆದುಕೊಳ್ಳುಲು ಆಗಲ್ಲ. ಆಗಮ   ಪಂಡಿತರು ಬಂದು ಏನು ವರದಿ ಕೊಡುತ್ತಾರೆ ಅದರ ಮೇಲೆ ತೀರ್ಮಾನ ಆಗುತ್ತದೆ ಎಂದು ಹೇಳಿದರು.ಇನ್ನು ಏಪ್ರಿಲ್   4 ಮತ್ತು ಏಪ್ರಿಲ್   5ರಂದು ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವ ನಡೆಯಲಿದ್ದು ಹಾಸನ ಜಿಲ್ಲಾಡಳಿತ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

Post a Comment

Previous Post Next Post