ಚನ್ನರಾಯಪಟ್ಟಣ: ಆಕಸ್ಮಿಕ ಬೆಂಕಿ ಅವಘಡದಿಂದ ಸಹೋದರರಿಗೆ ಸೇರಿದ ಮೂರು ಮನೆಗಳು ಬಹುತೇಕ ಅಗ್ನಿಗಾಹುತಿಯಾಗಿರುವ ಘಟನೆ ಶ್ರವಣಬೆಳಗೊಳ ಹೋಬಳಿಯ ಕಬ್ಬಾಳು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಹಾಡ ಹಗಲೇ ನಡೆದಿದೆ.
12.40ರ ಸುಮಾರಿಗೆ ಈ ಅವಘಡ ನಡೆದಿದ್ದು, ಇದರಿಂದ ನಗದು, ಚಿನ್ನಾಭರಣ, ದಿನನಿತ್ಯದ ಬಳಕೆ ವಸ್ತುಗಳು, ಕೊಬ್ಬರಿ ಸೇರಿದಂತೆ ಅಪಾರ ಪ್ರಮಾಣ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ನಗದು ಸೇರಿದಂತೆ 20 ಲಕ್ಷ ರೂ.ನಷ್ಟ
ಬೆಂಕಿ ದುರಂತದಲ್ಲಿ ಸುಮಾರು ಲಕ್ಷಾಂತರ ರೂ. ನಗದು, ಒಡವೆ, ಧವಸ ಧಾನ್ಯ, ಕೊಬ್ಬರಿ ಸೇರಿದಂತೆ ಗೃಹ ಬಳಕೆಯ ಎಲ್ಲಾ ವಸ್ತುಗಳು ಸುಟ್ಟು ಭಸ್ಮ ಆಗಿವೆ.ಅಲ್ಲದೆ ಗ್ರಾಮದ ರಾಮಣ್ಣ, ಸಣ್ಣರಾಮು ಮತ್ತು ಮಂಜೇಗೌಡ ಎಂಬುವರಿಗೆ ಸೇರಿದ ಮನೆಗಳು ಬಹುತೇಕ ಸುಟ್ಟು ಹೋಗಿವೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಠಾಣಾಧಿಕಾರಿ ಗಿಡ್ಡೆಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು.
ಆದರೆ ಆ ವೇಳೆಗಾಗಲೇ ಎಲ್ಲಾ ವಸ್ತುಗಳು ಬಹುತೇಕ ಸುಟ್ಟು ಹೋಗಿದ್ದವು.ರಾಮಣ್ಣ ಎಂಬುವರ ಮನೆಯಲ್ಲಿದ್ದ 100 ಗ್ರಾಂ, 50 ಸಾವಿರ ಇಲ್ಲವಾಗಿದೆ , ಮಂಜೇಗೌಡ ಅವರ ಮನೆಯಲ್ಲಿ 1.10 ಲಕ್ಷ ರೂ. ನಗದು 30 ಗ್ರಾಂ ಒಡವೆ ಸುಟ್ಟು ಹೋಗಿದೆ. ಸಣ್ಣರಾಮ ಅವರು ಸಂಗ್ರಹಿಸಿದ್ದ 5 ಸಾವಿರ ಕೊಬ್ಬರಿ ಸುಟ್ಟು ಕರುಕಲಾಗಿದೆ. 50 ಸಾವಿರದಷ್ಟು ನಗದು ಅರೆ-ಬರೆ ಸುಟ್ಟುಹೋದ ರೀತಿಯಲ್ಲಿ ಪತ್ತೆಯಾಗಿದೆ.
ನಗದು, ಒಡವೆ, ಗೃಹಬಳಕೆ ವಸ್ತುಗಳು, ಕೊಬ್ಬರಿ ನಾಶದಿಂದ ಅಂದಾಜು 20 ಲಕ್ಷ ಮೌಲ್ಯದ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಇಷ್ಟೇ ಅಲ್ಲದೆ, ಮೂರೂ ಮನೆಯ ಮಕ್ಕಳ ವಿದ್ಯಾಭ್ಯಾಸದ ದಾಖಲೆಗಳು, ಜಮೀನು, ಬ್ಯಾಂಕ್‌ಗೆ ಸೇರಿದ ದಾಖಲಾತಿಗಳು ಸುಟ್ಟು ಬಸ್ಮವಾಗಿವೆ,
ಮೂರೂ ಮನೆಗಳು ಒಂದಕ್ಕೆ ಒಂದು ಹೊಂದಿಕೊಂಡಂತೆ ಇದ್ದವು. ಶುಕ್ರವಾರವಾದ್ದರಿಂದ ಮಂಜೇಗೌಡ ಎಂಬುವರ ಮನೆಯಲ್ಲಿ ಬೆಳಗ್ಗೆ ದೇವರ ಪೂಜೆ ಮಾಡಿ ಮನೆಯಲ್ಲಿ ದೀಪ ಹಚ್ಚಿ ತಮ್ಮ ತಮ್ಮ ಕೆಲಸಕ್ಕೆಂದು ಹೊರ ಹೋಗಿದ್ದರು. ಆದರೆ ಗಾಳಿ ಅಥವಾ ಮತ್ತಾವ ಕಾರಣಕ್ಕೋ ದೀಪದ ಉರಿ, ಮನೆಗಳನ್ನೇ ಸುಟ್ಟಿದೆ. ಇದರಿಂದ ಮೂರೂ ಕುಟುಂಬಗಳು ಕಂಗಾಲಾಗಿವೆ.
ಮನೆಗೆ ಸಂಬoಧಿಸಿದ ಕಾಗದ ಪತ್ರಗಳೂ ಸಹ ಸುಟ್ಟು ಹೋಗಿದ್ದು, ಕುಟುಂಬ ಸದಸ್ಯರು ಕಣ್ಣೀರು ಇಡುವಂತಾಗಿದೆ. ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.