ಹಾಸನ : ಮುಕ್ತ ಮತದಾನ – ಸಮರ್ಥ ಸರ್ಕಾರ ನಿಟ್ಟಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 20 ಜಿಲ್ಲೆಗಳಿಂದ ಎಲ್ಲಾ ವಯೋಮಾನ ಮತ್ತು ಶೈಕ್ಷಣಿಕ ಹಿನ್ನೆಲೆಯ ವಿವಿಧ ಜಾತಿ, ಧರ್ಮಗಳ ಸಾವಿರಕ್ಕೂ ಮಿಕ್ಕ ಮತದಾರರ 'ಕ್ಷಿಪ್ರ ಸಮೀಕ್ಷೆ' ಒಂದನ್ನು 2022ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಕೈಗೊಳ್ಳಲಾಗಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮಾರಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ,ಅಧಿಕಾರರೂಢ ಭಾಜಪದ ಮೇಲೆ ರಾಜ್ಯದ ಜನತೆಯಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಬೆಲೆ ಏರಿಕೆ, ನಿರುದ್ಯೋಗ, ಇವೇ ಮೊದಲಾದ ನೈಜ ಸಮಸ್ಯೆಗಳನ್ನು ಜೊತೆಗೆ, ಈ ಹಿಂದೆ ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ತಂದಿರುವ ಲಾಕೌ ಡೌನ್ ನ್ನು ಸಮರ್ಪಕವಾಗಿ ನಿರ್ವಹಿಸಿಲ್ಲದಿರುವುದು, ಪ್ರಗತಿಪರ ಭೂಸುಧಾರಣೆ ಮತ್ತು ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆ (ಎಪಿಎಂಸಿ) ಕಾಯಿದೆಗಳಿಗೆ ತಂದಿರುವ ಅನಗತ್ಯ ತಿದ್ದುಪಡಿ ಮತ್ತು ಬಲತ್ಕಾರ ಭೂಸ್ವಾಧೀನದ ಇತ್ಯಾದಿಗಳ ಬಗ್ಗೆ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ ಎಂದರು. ಆಡಳಿತರೂಢ ಪಕ್ಷದ ಮೇಲಿನ ಅಸಮಾಧಾನ ಭಾಜಪದ ಬೆನ್ನಲುಬು ಎನ್ನಲಾಗಿರುವ ಬ್ರಾಹ್ಮಣ, ಲಿಂಗಾಯಿತ, ಮೇಲ್ಜಾತಿ ಮತದಾರರು, ಯುವಕರು ಮತ್ತು ಪ್ರೌಢಪದವಿ ಪೂರ್ವ ಶಿಕ್ಷಣ ಹೊಂದಿದವರಿಂದ ಒಕ್ಕಲಿಗ ಸಮುದಾಯ, ನೀರಾವರಿ ರೈತರಲ್ಲಿ ಮತ್ತಷ್ಟು ಅಧಿಕವಾಗಿರುತ್ತದೆ. ಕೋಮುಗಲಭೆ, ಕಲಹಗಳು ಉದ್ದೇಶಪೂರ್ವಕ ಸೃಷ್ಟಿ ಮಾಡಿರುವಂತಹವು ಮತ್ತು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದರೆ ಇವುಗಳನ್ನು ತಡೆಯಬಹುದಿತ್ತು.
ಭಾಜಪದಿಂದ ಭ್ರಷ್ಟಾಚಾರ ಮುಕ್ತ ಸ್ವಚ್ಛ ಆಡಳಿತ ಕೊಡಲು ಸಾಧ್ಯವಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 18ರಷ್ಟು ಮತದಾರರು ಮಾತ್ರ ಭಾರತೀಯ ಜನತಾ ಪಕ್ಷದ ಮೇಲೆ ಸ್ವಚ್ಛಾಡಳಿತ ವಿಚಾರದಲ್ಲಿ ಭರವಸೆ ಹೊಂದಿರುತ್ತಾರೆ. ಮಹಿಳೆಯರು, ಯುವಕರು, ಕಾಲೇಜು ಪದವೀಧರರು ಮತ್ತು ಉನ್ನತ ವ್ಯಾಸಂಗ ಪಡೆದವರ ಭರವಸೆ ಇನ್ನೂ ಕಡಿಮೆಯಾಗಿರುತ್ತದೆ. ಇನ್ನು ನಗರ ಮತದಾರರಲ್ಲಂತೂ ಸ್ವಚ್ಛ ಆಡಳಿತ ವಿಚಾರದಲ್ಲಿ ಭಾಜಪದ ಮೇಲಿನ ಭರವಸೆ ನಗಣ್ಯ ಎನ್ನಬಹುದು ! ಹಾಗೆಯೇ ಈ ವಿಚಾರದಲ್ಲಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಕೂಡ ಅಷ್ಟೇನೂ ಬರವಸೆ ಇಲ್ಲ ಎಂದು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ಮಡೆಸಲಾಗುತ್ತಿದ್ದು, ಕೋಮು ಕಲಹ, ಮತೀಯ ವಿವಾದಗಳ ಮೂಲಕ ಮತದಾರರನ್ನು ದಿಕ್ಕು ತಪ್ಪಿಸುವುದು, ಜೊತೆಗೆ, ಹಣ ಮುಂತಾದ 'ಅಮಿಷ' ಬಳಸಿ ಮಾಧ್ಯಮಗಳ ಮೂಲಕ ಸುಳ್ಳು ಭರವಸೆ ಕೊಡಲಾಗುತ್ತಿದೆ. 'ಅಡ್ಡ ದಾರಿ'ಯಲ್ಲಿ ಚುನಾವಣೆ ಫಲಿತಾಂಶವನ್ನು ಕೈವಶ ಮಾಡಿಕೊಳ್ಳುವ ಪ್ರಯತ್ನ ನಡೆಯಲಿದೆ ಎಂದಿರುವುದು ರಾಜ್ಯದ ಮತದಾರರ ನಿಸ್ಸಹಾಯಕ ಸ್ಥಿತಿಯನ್ನು ತೋರಿಸುತ್ತದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶ ಒದಗಿಸುವ ಸಮರ್ಥ ನಾಯಕತ್ವದ ವಿಚಾರದಲ್ಲಿ ಅಲ್ಪಸಂಖ್ಯಾತರು, ಮಹಿಳೆಯರು, ಪದವೀಧರರೂ ಸೇರಿದಂತೆ ಸಿದ್ದರಾಮಯ್ಯನವರ ಮೇಲೆ ಅಧಿಕ ಒಲವು ಕಂಡುಬರುತ್ತದೆ.ಕಾಂಗ್ರೆಸ್ ಪಕ್ಷ ತಾನೇ ಸುಭದ್ರ ಸರ್ಕಾರ ರಚಿಸಿ ಸಮರ್ಥ ಆಡಳಿತ ನೀಡುವುದೂ ಕಷ್ಟಸಾಧ್ಯ. ಸಮಾನ ಮನಸ್ಕ ಪಕ್ಷಗಳೊಡನ 'ಹೊಂದಾಣಿಕೆ' ಮಾತ್ರವಲ್ಲ ಚಳುವಳಿ, ಸಂಘಟನೆಗಳು ಎತ್ತಿರುವ ಹೋರಾಟ ವಿಚಾರಗಳನ್ನು ಪರಿಗಣಿಸಿ, ಅವುಗಳ ವಿಶ್ವಾಸ ಪಡೆದು, ಮುಂದೆ ಸಮರ್ಥ ಸರ್ಕಾರ ನೀಡುವ ನಿಟ್ಟಿನಲ್ಲಿ ಭರವಸೆ ಮೂಡಿಸುವಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಯಶಸ್ಸು ಸಾಧಿಸುತ್ತದೆ ಎನ್ನುವುದರ ಮೇಲೆ ರಾಜ್ಯದ ಅಷ್ಟೇಕೆ ದೇಶದ ರಾಜಕೀಯ ಭವಿಷ್ಯ ನಿಂತಿರುತ್ತದೆ ಎಂದು ಅಭಿಪ್ರಾಯ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಸಂಘಟನೆಯ ಕಾರ್ಯದರ್ಶಿ ಧರ್ಮೇಶ್, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಅರ್. ನವೀನ್ ಕುಮಾರ್, ರೈತ ಸಂಘದ ಮುಖಂಡ ಅರಸು ಇತರರು ಉಪಸ್ಥಿತರಿದ್ದರು.