ಟಿಕೆಟ್​​ಗಾಗಿ ಪ್ರತಿಷ್ಠೆಗೆ ಬಿದ್ದ ರೇವಣ್ಣ ಕುಟುಂಬ; 'ಹಾಸನ ಕೋಟೆ' ಗಲಾಟೆಯಲ್ಲಿ ಕೌತುಕುದ ಮನೆ..!

ಜೆಡಿಎಸ್‌ನಲ್ಲಿ ಹಾಸನ ಟಿಕೆಟ್​​ಗಾಗಿ ದೊಡ್ಡ ಹಂಗಾಮಾ ನಡೀತಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ಅಸ್ತಿತ್ವ ಸ್ಥಾಪಿಸೋದ್ಯಾರು ಎಂಬ ಕೌತುಕ ಮನೆ ಮಾಡಿದೆ. ಇಷ್ಟೆಲ್ಲ ಕುಟುಂಬ ಕಲಹದ ಮಧ್ಯೆ ಮತಯುದ್ಧಕ್ಕೆ ಸೇನಾನಿಗಳ ಇಳಿಸೋ ಭಾರ ಹೆಚ್‌ಡಿಕೆ ತಲೆ ಮೇಲಿದೆ. 93 ಕ್ಷೇತ್ರಗಳಿಗೆ ಕದನ ಕಲಿಗಳನ್ನ ಇಳಿಸಿರುವ ಹೆಚ್‌.ಡಿ ಕುಮಾರಸ್ವಾಮಿ ಇನ್ನುಳಿದ ಕ್ಷೇತ್ರಗಳಿಗೆ ಇವತ್ತು ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದ್ದಾರೆ.

ಚುನಾವಣಾ ಕುರುಕ್ಷೇತ್ರದಲ್ಲಿ ಕದನ ಕಲಿಗಳನ್ನು 3 ಪಕ್ಷಗಳು ಅಣಿಗೊಳಿಸ್ತಿದ್ದಾರೆ. ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿ ರಿಲೀಸ್ ಮಾಡಿ ಸೇನಾನಿಗಳ ಸಮರ ಸಾರಿದೆ. ಬಿಜೆಪಿ ಗೆಲ್ಲುವ ಕುದುರೆಗಳಿಗೆ ಲಗಾಮು ಹಾಕಿ ರೇಸ್‌ಗಿಳಿಸಲು ಇಳಿಸಲು ಮುಹೂರ್ತ ಹುಡುಕುತ್ತಿದೆ. ಇತ್ತ ಊರಿಗೂ ಮುಂಚೆ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಇಳಿಸಿದ್ದ ಜೆಡಿಎಸ್ 2ನೇ ಪಟ್ಟಿಗೆ ಇವತ್ತು ಮುಹೂರ್ತ ಇಟ್ಟಿದೆ.

ಇವತ್ತು JDS ಎರಡನೇ ಪಟ್ಟಿ ರಿಲೀಸ್..!
ಈಗಾಗಲೇ ಮೊದಲ ಲಿಸ್ಟ್‌ನಲ್ಲಿ ಘೋಷಣೆಯಾಗಿದ್ದ ಅಭ್ಯರ್ಥಿಗಳು ಎಲೆಕ್ಷನ್ ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ. ಪಂಚರತ್ನ ರಥಯಾತ್ರೆಯಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಜೊತೆ ಮತಬೇಟೆ ನಡೆಸ್ತಿದ್ದಾರೆ. ಇದೀಗ 224 ಕ್ಷೇತ್ರಗಳಿಗೂ ಟಿಕೆಟ್‌ ಫೈನಲ್ ಮಾಡಲು ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ. ಇವತ್ತು ಜೆಡಿಎಸ್‌ನ 2ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಗೊಂದಲ ಇರುವುದು ನಿಜ. ಅದನ್ನು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್​.ಡಿ ದೇವೇಗೌಡರ ಬಳಿ ಚರ್ಚಿಸಲಾಗಿದೆ ಎಂದಿದ್ದಾರೆ.

ಇವತ್ತು 2ನೇ ಪಟ್ಟಿ ರಿಲೀಸ್
ಹಾಸನದಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಬಗ್ಗೆ ದೇವೇಗೌಡರು ಸಲಹೆಯನ್ನು ಕೊಟ್ಟಿದ್ದಾರೆ. ಇದರ ಮೇಲೆ ತೀರ್ಮಾನ ಮಾಡುತ್ತೇವೆ. ಜೆಡಿಎಸ್​ನ 2 ಪಟ್ಟಿ ಬಿಡುಗಡೆ ಮಾಡುತ್ತೇವೆ. ಹಾಸನದ್ದು ಇನ್ನು ಸಮಸ್ಯೆಯಿದೆ. ಅದನ್ನು ಬಗೆಹರಿಸೋಣ. ಎಲ್ಲವನ್ನು ಸುಗಮವಾಗಿ ಬಗೆಹರಿಸುತ್ತೇವೆ. ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ. ರೇವಣ್ಣ ಅವರು ಈಗಾಗಲೇ ಚರ್ಚೆ ಮಾಡಿರಬೇಕು.


ಹೆಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ತಡರಾತ್ರಿ ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಾಸನ ಪ್ರಹಸನ ಬಗೆಹರಿದಿಲ್ಲ. ಹೀಗಾಗಿ ಇವತ್ತು ಹಾಸನ ಟಿಕೆಟ್‌ ಫೈಟ್‌ಗೆ ತೆರೆ ಬೀಳೋ ಸಾಧ್ಯತೆಯಂತೂ ಇಲ್ಲ. ಆದ್ರೂ ಸ್ವರೂಪ್ ಪ್ರಕಾಶ್‌ಗೆ ಬಹುತೇಕ ಟಿಕೆಟ್ ಫೈನಲ್ ಅಂತಾನೆ ಹೇಳಲಾಗ್ತಿದೆ. ಇದರ ಜೊತೆಗೆ ಹಲವು ಪ್ರಮುಖ ಕ್ಷೇತ್ರಗಳಿಗೆ ಟಿಕೆಟ್ ಇವತ್ತೇ ಫೈನಲ್ ಆಗಲಿದೆ ಎಂದು ತಿಳಿದುಬಂದಿದೆ.

'ದಳ' ಸಂಭಾವ್ಯ ಅಭ್ಯರ್ಥಿಗಳು

  • ಅರಸೀಕೆರೆ ಕ್ಷೇತ್ರ -ಬಾಣಾವರ ಅಶೋಕ್

ಇನ್ನೂ ಶಿವಲಿಂಗೇಗೌಡ ದಳಕ್ಕೆ ಗುಡ್​ ಬೈ ಹೇಳಿ 'ಕೈ' ಹಿಡಿಯೋದು ಬಹುತೇಕ ಖಚಿತವಾಗಿದ್ದು, ಅರಸೀಕೆರೆ ಕ್ಷೇತ್ರಕ್ಕೀಗ ಬಾಣಾವರ ಅಶೋಕ್ ಸಂಭಾವ್ಯ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ.

  • ನರಸಿಂಹರಾಜ ಕ್ಷೇತ್ರ - ಸಿ.ಎಂ.ಇಬ್ರಾಹಿಂ

ಇತ್ತ ನರಸಿಂಹರಾಜ ಕ್ಷೇತ್ರಕ್ಕೆ ಇಬ್ಬರ ಹೆಸರು ಕೇಳಿ ಬಂದಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂಗೆ ಬಹುತೇಕ ಟಿಕೆಟ್​ ಫೈನಲ್ ಎನ್ನಲಾಗಿದೆ.

  • ಕಡೂರು ಕ್ಷೇತ್ರ -ಧನಂಜಯ

ಕಡೂರು ಕ್ಷೇತ್ರದಿಂದ ಧನಂಜಯ್‌ಗೆ ಜೆಡಿಎಸ್‌ ಟಿಕೆಟ್ ಅನೌನ್ಸ್ ಆಗುವ ಸಾಧ್ಯತೆ ಇದೆ.

  • ಬಸವಕಲ್ಯಾಣ ಕ್ಷೇತ್ರ -ಮಲ್ಲಿಕಾರ್ಜುನ ಖೂಬ
  • ಇನ್ನೂ ಮೊನ್ನೆಯಷ್ಟೇ ಜೆಡಿಎಸ್ ಸೇರ್ಪಡೆಯಾಗಿರೋ ಮಲ್ಲಿಕಾರ್ಜುನ ಖೂಬಗೆ ಬಸವಕಲ್ಯಾಣ ಟಿಕೆಟ್ ಸಿಗೋದು ಫಿಕ್ಸ್ ಎನ್ನಲಾಗಿದೆ.
    ಶಿರಾ ಕ್ಷೇತ್ರ -ಸಿ.ಆರ್.ಉಗ್ರೇಶ್

    • ರಾಜರಾಜೇಶ್ವರಿ ನಗರ ಕ್ಷೇತ್ರ -ಕೃಷ್ಣಮೂರ್ತಿ
    • ತಿಪಟೂರು ಕ್ಷೇತ್ರ -ಶಾಂತಕುಮಾರ್
    • ಹಳಿಯಾಳ ಕ್ಷೇತ್ರ -ಶ್ರೀಕಾಂತ್ ಘೋಟ್ನೇಕರ್
    • ಕಂಪ್ಲಿ ಕ್ಷೇತ್ರ -ರಾಜು ನಾಯ್ಕ
    • ಅರಕಲಗೂಡು -ಎ.ಮಂಜು

    ಶಿರಾ ಕ್ಷೇತ್ರಕ್ಕೆ ಸಿ.ಆರ್.ಉಗ್ರೇಶ್, ರಾಜರಾಜೇಶ್ವರಿ ನಗರಕ್ಕೆ ಕೃಷ್ಣಮೂರ್ತಿ, ತಿಪಟೂರು ಕ್ಷೇತ್ರಕ್ಕೆ ಶಾಂತಕುಮಾರ್, ಹಳಿಯಾಳ ಕ್ಷೇತ್ರಕ್ಕೆ ಶ್ರೀಕಾಂತ್ ಘೋಟ್ನೇಕರ್, ಕಂಪ್ಲಿ ಕ್ಷೇತ್ರಕ್ಕೆ ರಾಜು ನಾಯ್ಕ, ಅರಕಲಗೂಡು ಕ್ಷೇತ್ರಕ್ಕೆ ಎ. ಮಂಜು ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

    ಹಾಸನ ಕಗ್ಗಂಟು.. ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ತಲೆನೋವು ಹೆಚ್‌ಡಿ ಕುಮಾರಸ್ವಾಮಿಗೆ ಶುರುವಾಗಿದೆ. ಇದೀಗ ಯಾರಿಗೆಲ್ಲ ಟಿಕೆಟ್‌ ಸಿಗುತ್ತೆ. ಯಾವೆಲ್ಲಾ ಆಕಾಂಕ್ಷಿಗಳಿಗೆ ನಿರಾಸೆ ಕಾದಿದೆ ಅನ್ನೋದು ಇವತ್ತು ಗೊತ್ತಾಗಲಿದೆ.



Post a Comment

Previous Post Next Post