ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ತೆರೆಮರೆಯಲ್ಲಿ ನಡೆದಿದ್ದ ಅಚ್ಚರಿಯ ರಾಜಕೀಯ ಬೆಳವಣಿಗೆ ಹಾಗೆಯೇ ತಣ್ಣಗಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದ ಎಂ.ಟಿ.ಕೃಷ್ಣೇಗೌಡ ಅವರು, ಶುಕ್ರವಾರ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಎಂ.ಟಿ.ಕೃಷ್ಣೇಗೌಡ ಅವರು ಕಡೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅದಾದ ಕೆಲವೇ ಹೊತ್ತಿನಲ್ಲಿ ಬಿಜೆಪಿ ಹೈಕಮಾಂಡ್ ಬಿ ಮತ್ತು ಸಿ ಫಾರಂ ನೀಡಿದ್ದರಿಂದ ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣೇಗೌಡ ಉಮೇದುವಾರಿಕೆ ಸಲ್ಲಿಸಿದ್ದರು.
ಇಮೇಲ್ ಮೂಲಕ ಬಿ ಮತ್ತು ಸಿ ಫಾರಂ ಕಳುಹಿಸಲಾಗಿತ್ತು. ಆದರೆ ಅದಕ್ಕೂ ಮುನ್ನವೇ ಬಿಜೆಪಿಯಿಂದ ಎಚ್.ಯೋಗಾ ರಮೇಶ್ ನಾಮಪತ್ರ ಸಲ್ಲಿಸಿದ್ದರು. ಯೋಗಾ ರಮೇಶ್ ಮಾತ್ರವಲ್ಲದೆ ಕೃಷ್ಣೇಗೌಡ ಸಹ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರಿಂದ ಯಾರು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂಬ ಅನುಮಾನ ಮೂಡಿತ್ತು.
ಆದರೆ ಶುಕ್ರವಾರ ನಡೆದ ನಾಮಪತ್ರ ಪರಿಶೀಲನೆ ವೇಳೆ, ಕೃಷ್ಣೇಗೌಡ ಬಿಜೆಪಿಯಿಂದ ಸಲ್ಲಿಸಿದ್ದ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಹೀಗಾಗಿ ಎಚ್.ಯೋಗಾ ರಮೇಶ್ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.