ಭವಾನಿಗೆ ಟಿಕೆಟ್‌ ನೀಡದಿದ್ದರೆ ನನಗೂ ಬೇಡ: ಎಚ್‌.ಡಿ. ರೇವಣ್ಣ

ಹಾಸನ: 'ಪತ್ನಿ ಭವಾನಿ ಅವರಿಗೆ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ನೀಡದಿದ್ದರೆ, ಹೊಳೆನರಸೀಪುರ ದಿಂದ ನನಗೂ ಟಿಕೆಟ್‌ ಬೇಡ' ಎಂಬ ಸಂದೇಶವನ್ನು ಶಾಸಕ ಎಚ್‌.ಡಿ. ರೇವಣ್ಣ ರವಾನಿಸಿದ್ದಾರೆ.

ಶುಕ್ರವಾರ ರಾತ್ರಿ ಆಪ್ತರು ಹಾಗೂ ಮುಖಂಡರೊಂದಿಗೆ ಇಲ್ಲಿನ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಅವರು ಮಂಡಿಸಿದ ವಾದಕ್ಕೆ ಬಹುತೇಕ ಮುಖಂಡರೂ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.

'ಹಾಸನ ಕ್ಷೇತ್ರದಲ್ಲಿ ಬಿಜೆಪಿಯನ್ನು ಎದುರಿಸಲು ಪ್ರಬಲ ಅಭ್ಯರ್ಥಿ ಅಗತ್ಯ. ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕಿಳಿ ಸಿದರೆ ಗೆಲುವು ಸಾಧ್ಯವಿಲ್ಲ. ಮತ್ತೆ ಕ್ಷೇತ್ರ ಕೈತಪ್ಪಿದರೆ, ಕಾರ್ಯಕರ್ತರು ಅನಾಥಪ್ರಜ್ಞೆ ಅನುಭವಿಸಬೇಕಾಗುತ್ತದೆ. ಈ ಬಾರಿ ಏನಾದರೂ ಆಗಲಿ, ಪಕ್ಷ ಗೆಲ್ಲಬೇಕು' ಎಂದು ಮುಖಂಡರು ಪ್ರತಿಪಾದಿಸಿದ್ದಾರೆ.

ಅದರಿಂದ ಮತ್ತಷ್ಟು ಉತ್ತೇಜನ ಗೊಂಡಿರುವ ರೇವಣ್ಣ, 'ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಹೊಳೆನರಸೀಪುರದಲ್ಲಿ ಗೆದ್ದು ಏನು ಮಾಡುವುದು? ನನಗೂ ಅಲ್ಲಿನ ಟಿಕೆಟ್ ಬೇಡ. ಈ ಬಗ್ಗೆ ದೇವೇಗೌಡರಿಗೆ ಸಂದೇಶ ರವಾನಿಸುವೆ' ಎಂದು ಮುಖಂಡರಿಗೆ ತಿಳಿಸಿದ್ದಾರೆ.

'ಹಿರಿಯ ಸಹೋದರ ಬಾಲಕೃಷ್ಣೇ ಗೌಡ ಸೇರಿದಂತೆ ದೇವೇಗೌಡರ ಆಪ್ತರ ಮೂಲಕ ಈ ಸಂದೇಶವನ್ನು ದೇವೇಗೌಡರಿಗೆ ರವಾನಿಸಿದ್ದಾರೆ' ಎಂದು ಹೇಳಲಾಗುತ್ತಿದೆ.

ಈ ಕುರಿತು ದೇವೇಗೌಡರೂ ರೇವಣ್ಣ ಜೊತೆಗೆ ಚರ್ಚಿಸಿದ್ದು, ಗೊಂದಲಕ್ಕೆ ಅವಕಾಶ ವಿಲ್ಲದಂತೆ ಚರ್ಚಿಸಿ ತೀರ್ಮಾನಿಸಲಾಗುವುದು. ಆತುರದ ನಿರ್ಧಾರ ಕೈಗೊಳ್ಳ ಬಾರದೆಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಭವಾನಿ ಅವರು ಪಟ್ಟು ಸಡಿಲಿಸುತ್ತಿಲ್ಲ. ಪುತ್ರರು ಕೂಡ ತಾಯಿಯನ್ನು ಹಾಸನದಿಂದ ಕಣಕ್ಕಿಳಿಸಲೇಬೇಕೆಂದು ಹಟ ತೊಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೊನೆಯ ಅಸ್ತ್ರವಾಗಿ 'ನನಗೆ ಹೊಳೆನರಸೀಪುರ ಟಿಕೆಟ್‌ ಬೇಡ' ಎಂಬ ದಾಳವನ್ನು ರೇವಣ್ಣ ಉರುಳಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಲು ರೇವಣ್ಣ ನಿರಾಕರಿಸಿದರು.

Post a Comment

Previous Post Next Post