ದರ ಕುಸಿದ ಕಾಲದಲ್ಲಿ ರೈತರ ಕೈಹಿಡಿದ ಖರೀದಿ ಕೇಂದ್ರ

ಕೊಬ್ಬರಿಯ ಮುಕ್ತ ಮಾರುಕಟ್ಟೆ ಕೇಂದ್ರಗಳಾದ ತಿಪಟೂರು, ಅರಸೀಕೆರೆಯಲ್ಲಿ ಧಾರಣೆ ಕುಸಿದಿದ್ದು, ಚನ್ನರಾಯಪಟ್ಟಣ ತಾಲ್ಲೂಕಿನ ರೈತರು, ಎರಡು ತಿಂಗಳಿಂದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆಯ ಮೂರು ಖರೀದಿ ಕೇಂದ್ರಗಳ ಮೂಲಕವೇ ಕೊಬ್ಬರಿ ಮಾರುತ್ತಿದ್ದಾರೆ.


ತಿಪಟೂರು ಮಾರುಕಟ್ಟೆಯ‌ಲ್ಲಿ ‌ಶನಿವಾರ (ಮೇ 27) ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹ 9,108 ಇತ್ತು. ಆದರೆ, ಖರೀದಿ ಕೇಂದ್ರದಲ್ಲಿ ₹11,750 ದರವಿದೆ. ಖರೀದಿ ಕೇಂದ್ರಕ್ಕೆ ಮಾರಿದರೆ ಹಣಕ್ಕಾಗಿ ಸುಮಾರು ಒಂದೂವರೆ ತಿಂಗಳು ಕಾಯಬೇಕು. ಮಾರ್ಚ್ ಕೊನೆಯ ವಾರ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಮಾರಿದ್ದವರಿಗೆ ಮೇ ಮೂರನೇ ವಾರದಲ್ಲಿ ಹಣ ಬಂದಿದೆ.


ರಾಜ್ಯದ ವಿವಿಧೆಡೆಯ ತೆಂಗು ಬೆಳೆಗಾರರು, ಪ್ರತಿಭಟಿಸಿದ್ದರಿಂದ ಸರ್ಕಾರವು ನಾಫೆಡ್ ಖರೀದಿ ಕೇಂದ್ರಗಳನ್ನು ಆರಂಭಿಸಿತ್ತು. ಚನ್ನರಾಯಪಟ್ಟಣ, ಶ್ರವಣಬೆಳಗೊಳ ಮತ್ತು ನುಗ್ಗೇಹಳ್ಳಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿದ್ದು, ಮೇ ತಿಂಗಳಲ್ಲಿ ರೈತರ ಬಳಿ ಕೊಬ್ಬರಿ ದಾಸ್ತಾನು ಕಡಿಮೆಯಾಗಿದೆ.

ಪ್ರಾರಂಭದಲ್ಲಿ ಒಂದೇ ಕೇಂದ್ರ ಮತ್ತು ಗೋದಾಮು ಸಮಸ್ಯೆಯಿಂದ ರೈತರು ಮಾರುಕಟ್ಟೆ ಬಳಿ ಮೂರು ದಿನ ಕಾಯಬೇಕಿತ್ತು. ಇದೀಗ ಹೆಚ್ಚುವರಿ ಎರಡು ಖರೀದಿ ಕೇಂದ್ರಗಳಿರುವುದರಿಂದ ಒಂದೇ ದಿನಕ್ಕೆ ಕೊಬ್ಬರಿ ಮಾರಾಟ ಮಾಡಲು ಸಾಧ್ಯವಾಗಿದೆ.

'ಮಾರ್ಚ್ 8 ರಿಂದ ಈ ಕೇಂದ್ರಗಳಲ್ಲಿ ‌ಖರೀದಿ ಪ್ರಾರಂಭವಾಗಿದ್ದು, ಜುಲೈ 27ರ ವರೆಗೆ ಅವಕಾಶವಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ರೈತರು ನೋಂದಾಯಿಸಿದ್ದು, 9.900 ಟನ್‌ ಕೊಬ್ಬರಿ ಕೇಂದ್ರಕ್ಕೆ ಬರುವ ನಿರೀಕ್ಷೆ ಇದೆ' ಎನ್ನುತ್ತಾರೆ ಚನ್ನರಾಯಪಟ್ಟಣ ಖರೀದಿ ಕೇಂದ್ರದ ವ್ಯವಸ್ಥಾಪಕ ಚೇತನ್.

ಅಲ್ಲಿ 5,400 ಟನ್‌, ನುಗ್ಗೇಹಳ್ಳಿಯಲ್ಲಿ 800 ಟನ್‌, ಶ್ರವಣಬೆಳಗೊಳದಲ್ಲಿ 1,300 ಟನ್‌ ಸೇರಿದಂತೆ ಇದುವರೆಗೆ ರೈತರಿಂದ ಒಟ್ಟು 7,500 ಟನ್‌ ಕೊಬ್ಬರಿ ಖರೀದಿಸಲಾಗಿದೆ. ಮೊದಲ ಹಂತದಲ್ಲಿ ₹ 13 ಕೋಟಿಯನ್ನು ರೈತರಿಗೆ ಪಾವತಿಸಲಾಗಿದೆ.


'ಆಧಾರ್ ಮತ್ತು ಬ್ಯಾಂಕ್ ಖಾತೆ ಹೊಂದಾಣಿಕೆ ಸಮಸ್ಯೆಯಿಂದ ಮಾರ್ಚ್‌ನಲ್ಲಿ ಕೆಲವರಿಗೆ ಹಣ ಸಿಗುವುದು ವಿಳಂಬವಾಯಿತು‌. ಮೇ ಕೊನೆಯ ವಾರದಲ್ಲಿ ಎರಡನೇ ಕಂತಿನ ಹಣ ಬಿಡುಗಡೆಯಾಗಲಿದ್ದು, ಜೂನ್ ಮೊದಲ ವಾರದಲ್ಲಿ ಎಲ್ಲ ರೈತರ ಖಾತೆಗೆ ಹಣ ಸೇರುತ್ತದೆ' ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ತಿಳಿಸಿದರು.

'ಪ್ರತಿ ರೈತ 20 ಕ್ವಿಂಟಲ್ ಕೊಬ್ಬರಿ ಮಾರಬಹುದು. ಒಂದು ತಿಂಗಳಿನಿಂದ ರೈತರ ನೋಂದಣಿ ನಿಲ್ಲಿಸಲಾಗಿದೆ. ಬೆಳೆ ಸಮೀಕ್ಷೆ ಮಾಡುವಾಗ ಕೆಲವು ರೈತರ ತೋಟದ ಬದಲು ಹೊಲ, ಪಾಳು ಭೂಮಿ ಎಂದು ನಮೂದಿಸಿದ್ದು, ಅದರಿಂದ ಕೆಲವು ರೈತರ ನೋಂದಣಿ ಸಾಧ್ಯವಾಗಿಲ್ಲ. ಹೀಗಾಗಿ ಮತ್ತೊಮ್ಮೆ ಅವಕಾಶ ನೀಡಬೇಕು' ಎಂಬುದು ರೈತರ ಬೇಡಿಕೆ.

Post a Comment

Previous Post Next Post