ಅರೇಹಳ್ಳಿ: ಒಂದು ಚಿಕ್ಕ ಲಾರ್ವ ದೊಡ್ಡ ಪತಂಗವಾಗಲು ತುಂಬಾ ಕಷ್ಟಪಡುತ್ತದೆ. ಪತಂಗ ನೋಡಲು ವಿವಿಧ ಬಣ್ಣಗಳಿಂದ ಸುಂದರವಾಗಿ ಕಂಡರೂ ಅದು ಅನುಭವಿಸಿದ ನೋವು ಅದಕ್ಕೆ ಮಾತ್ರ ತಿಳಿದಿರುತ್ತದೆ. ಹೀಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿರುವ ವ್ಯಕ್ತಿಗಳು ಅಂತಹ ಕಷ್ಟಗಳನ್ನು ದಾಟಿ ಬಂದವರಾಗಿರುತ್ತಾರೆ ಎಂದು ಅನುಗ್ರಹ ಪ್ರೌಢಶಾಲೆಯ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಅನುಗ್ರಹ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಹೋಬಳಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವನವೆಂಬ ಪರೀಕ್ಷೆಯಲ್ಲಿ ನಾವು ಯಶಸ್ಸನ್ನು ಸಾಧಿಸಬೇಕಾದರೆ ಇಂದಿನಿಂದಲೆ ಪ್ರಯತ್ನ ಮಾಡಬೇಕು. ಗುರು-ಹಿರಿಯರ ಮಾರ್ಗದರ್ಶನವಿದ್ದಾಗ ಮಾತ್ರ ನಾವು ಗುರಿಯನ್ನು ತಲುಪಲು ಸಾಧ್ಯ. ಪ್ರತಿದಿನ ಶಿಕ್ಷಕರು ಮಾಡುವ ಪಾಠವನ್ನು ಅಂದೆ ಕಲಿತಿದ್ದೇ ಆದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿರುವುದಿಲ್ಲ. ತಾಲೂಕಿಗೆ ತೃತೀಯ ಹಾಗೂ ಹೋಬಳಿಗೆ ಪ್ರಥಮ ಸ್ಥಾನ ಗಳಿಸಿದ ತುಷಾರ್ ಮತ್ತು ಹೋಬಳಿಗೆ ದ್ವಿತೀಯ ಸ್ಥಾನವನ್ನು ಗಳಿಸಿದ ಉಮ್ಮೆ ಹಾನಿ ಅಂಬರ್ ರವರನ್ನು ಗೌರವಿಸುತ್ತಿರುವುದು ಸಂತಸವಾಗುತ್ತಿದ್ದು ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಪರೀಕ್ಷೆಯ ಭಯದಿಂದ ಅನುತ್ತೀರ್ಣರಾಗಿ ಮಾನಸಿಕ ತೊಳಲಾಟಕ್ಕೊಳಪಟ್ಟು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರವನ್ನು ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಈ ವೇಳೆ ಮುಖ್ಯ ಶಿಕ್ಷಕ ರಂಜಿತ್ ಕುಮಾರ್ ಕೆ.ಎಸ್, ಶಿಕ್ಷಕರಾದ ಸುಮಿತಾ, ನಿರ್ಮಲ, ಚಂದ್ರಯ್ಯ, ಜ್ಯೋತಿ, ಗ್ರೇಷಿಯನ್ ಹಾಗೂ ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು.
ಹಾಸನ ಜಿಲ್ಲೆ ವ್ಯಾಪ್ತಿಯ ಸುದ್ದಿಗಳ ಪ್ರಕಟಣೆಗೆ ಸುದ್ದಿಯನ್ನು hassansimenews@gmail.com ಗೆ ಇ- ಮೇಲ್ ಕಳುಹಿಸಿ.
ಹಾಸನ ಜಿಲ್ಲೆಯ ಡಿಜಿಟಲ್ ವೆಬ್ ಚಾನಲ್ ಇನ್ನಷ್ಟು ಅಪ್ಡೇಟ್ ಗಳಿಗಾಗಿ ಹಾಸನ ಸೀಮೆ ಸದಸ್ಯತ್ವ ಪಡೆಯಲು ಈ ಕೆಳಗಿನ ಲಿಂಕ್ ಸ್ಪರ್ಶಿಸಿ
👇👇👇
Tags
ಬೇಲೂರು