ಅರೇಹಳ್ಳಿ: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಇರುವುದರಿಂದ ಮಳೆ ನೀರು ರಭಸವಾಗಿ ರಸ್ತೆ ಮೇಲೆ ಹರಿದು ಇಳಿಜಾರಿನ ಪ್ರದೇಶದಲ್ಲಿ ಕೊರಕಲು ಉಂಟು ಮಾಡುತ್ತಿದೆ.ಚರಂಡಿಗಳಲ್ಲಿ ನೀರು ನಿಂತಲ್ಲೆ ನಿಲ್ಲುವುದರಿಂದ ಸೊಳ್ಳೆಯಿಂದ ಉತ್ಪತ್ತಿಯಾಗುವ ಡೆಂಗ್ಯೂ ರೋಗಕ್ಕೆ ಆಹ್ವಾನ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಕಲಚೇತನ ಮೊಹಮ್ಮದ್ ಘುಫ್ರಾನ್ ತಮ್ಮ ಅಸಹಾಯಕತೆಯನ್ನು ಹೊರಹಾಕಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಅನುಗ್ರಹ ಪ್ರಾಥಮಿಕ,ರೋಟರಿ, ಮಲ್ನಾಡ್ ಶಾಲೆ ಹಾಗೂ ಹಿರಿಗರ್ಜೆ-ವೆಂಕಟಿಪೇಟೆ ಮತ್ತು ಹೆಗ್ಗಡಿಹಳ್ಳಿಯನ್ನು ಮುಖ್ಯರಸ್ತೆಯಿಂದ ರಾಮನಗರದ ಮೂಲಕ ಸಂಪರ್ಕಿಸುವ ರಸ್ತೆಯು ಅತ್ಯಂತ ಕಳಪೆಯಾಗಿದ್ದು ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿದ ಅವರು, ಜೋರು ಮಳೆ ಸುರಿದರೆ ಕೊಳಚೆ ನೀರು ಮಳೆಯೊಳಗೆ ಬರುತ್ತಿದೆ. ಕಳಪೆ ರಸ್ತೆಯ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ
ಸ್ಪಂದಿಸುತ್ತಿಲ್ಲ. ನಡೆದುಕೊಂಡು ಬರುವ ಪಾದಚಾರಿಗಳಿಗೂ ಹಾಗೂ ದ್ವಿಚಕ್ರ ವಾಹನ ಸವಾರರಿಗೂ ಈ ರಸ್ತೆಯಲ್ಲಿ ಸಂಚರಿಸಲು ತುಂಬಾ ತ್ರಾಸವಾಗುತ್ತಿದೆ. ಎದುರಿನಿಂದ ಬರುವ ವಾಹನಗಳಿಗೆ ದಾರಿ ಬಿಟ್ಟುಕೊಡುವ ವೇಳೆ ಆಯತಪ್ಪಿ ಬಿದ್ದು ಅನೇಕ ಮಂದಿಗೆ ಪೆಟ್ಟಾಗಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಕೇವಲ ಚುನಾವಣೆಯ ವೇಳೆ ರಸ್ತೆ ಮಾಡಿಸಿಕೊಡುತ್ತೇವೆಂದು ಬರೀ ಸುಳ್ಳು ಭರವಸೆ ನೀಡುತ್ತಾರೆ. ವಿಕಲಚೇತನನಾದ ನನಗೆ ಸರಕಾರ ಮೂರು ಚಕ್ರದ ಸ್ಕೂಟಿಯನ್ನು ನೀಡಿದರೂ ರಸ್ತೆಯ ತುಂಬೆಲ್ಲಾ ಗುಂಡಿಗಳಿರುವುದರಿಂದ ಚಾಲನೆ ಮಾಡಲು ಸಾಧ್ಯವಿಲ್ಲ. ಸ್ಕೂಟಿಯಲ್ಲಿ ತೆರಳುವ ವೇಳೆ ಕೆಳಗೆ ಬಿದ್ದ ನನ್ನನ್ನು ಅಪರಿಚಿತ ವ್ಯಕ್ತಿ ಬಂದು ಕಾಪಾಡಿದರು. ಆದ್ದರಿಂದ ದಯಮಾಡಿ ಆದಷ್ಟು ಬೇಗ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು. `
�
