ಹಾಸನ : ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ಕೃಷಿಕ್ ಸರ್ವೋದಯ ಫೌಂಡೇಶನ್ ಹಾಸನ ಶಾಖೆಯ ವತಿಯಿಂದ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಕಾರ್ಯದರ್ಶಿ ಹೆಚ್.ಪಿ. ಮೋಹನ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಅವಕಾಶಗಳು ಇದ್ದರೂ ಸಹ ಕರ್ನಾಟಕದ ಪದವೀಧರ ವಿದ್ಯಾರ್ಥಿಗಳು ಅದರಲ್ಲೂ ಹಾಸನ ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಲ್ಲಿ ಭಾಗವಹಿಸಲು ಸೂಕ್ತ ತೀರ್ಮಾನ ತೆಗೆದುಕೊಳ್ಳದೆ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗಿರುತ್ತಾರೆ. ಹಾಸನ ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳು ಬ್ಯಾಂಕ್ ನೇಮಕಾತಿ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗಲು ಉತ್ತೇಜನ ನೀಡುವ ಸಲುವಾಗಿ ಕೃಷಿಕ್ ಸರ್ವೋದಯ ಫೌಂಡೇಶನ್ ಶಾಖೆಯ ವತಿಯಿಂದ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ತೀರ್ಮಾನಿದೆ ಎಂದರು.
ಐಬಿಪಿಎಸ್ (ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ) ತನ್ನ ನೇಮಕಾತಿಯಲ್ಲಿ ಭಾಗವಹಿಸುವ ಬ್ಯಾಂಕ್ಗಳಲ್ಲಿ ಕ್ಲೆರಿಕಲ್ ಕೇಡರ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಮುಂದಿನ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಆರಂಭಿಸಲು ವೇಳಾಪಟ್ಟಿ ಬಿಡುಗಡೆ ಮಾಡಿದ್ದು. ಈ ಹುದ್ದೆಗಳಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್, ಅಕ್ಟೋಬರ್ 2023 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತದೆ. ಇದರಲ್ಲಿ ಸಾವಿರಾರು ಬ್ಯಾಂಕಿಂಗ್ ಹುದ್ದೆಗಳು ಲಭ್ಯವಿದೆ.
ಆಸಕ್ತ ಪದವೀಧರ ಅಭ್ಯರ್ಥಿಗಳು ತಮ್ಮ ಪದವಿ ಪ್ರಮಾಣಪತ್ರ, ಐಬಿಪಿಎಸ್ ಪರೀಕ್ಷೆಗೆ ಆನ್ನೈನ್ ಮೂಲಕ ಸಲ್ಲಿಸಿರುವ ಅರ್ಜಿಯ ಜೆರಾಕ್ಸ್ ಸಮೇತ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಸಂಸ್ಥಯ ಹಾಸನ ಶಾಖೆಗೆ ಖುದ್ದಾಗಿ ಭೇಟಿ ನೀಡಿ ಕೃಷಿಕ್ ಸರ್ವೋದಯ ಫೌಂಡೇಶನ್ ನೆಡೆಸುವ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್ ಹಾಸನ ಶಾಖೆಯ ನಿರ್ದೇಶಕ ವಿರುಪಾಕ್ಷ, ಐ.ಎಂ.ಎ. ಮೋಹನ್, ಸುಬ್ಬಸ್ವಾಮಿ, ಟಿ. ಮಂಜುನಾಥ್, ಜಂಠಿ ಕಾರ್ಯದರ್ಶಿ ಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.
- ಎರಡುವರೆ ತಿಂಗಳ ಉಚಿತ ತರಬೇತಿ ಕಾರ್ಯಗಾರ. ತರಬೇತಿ ಕೇವಲ ಬ್ಯಾಂಕಿಂಗ್ ಪರೀಕ್ಷೆಗೆ ಮಾತ್ರವಲ್ಲದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಕಾರಿ
- ಬ್ಯಾಂಕಿಗೆ ಸಂಬಂಧಪಟ್ಟ ವಿವಿಧ ವಿಷಯಗಳು ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕೋಚಿಂಗ್
- 40 ರಿಂದ 50 ಸಾವಿರ ರೂಪಾಯಿಗಳು ಖರ್ಚು ಮಾಡಿ ಪಡೆಯುವ ಶಿಕ್ಷಣ ಉಚಿತವಾಗಿ ಕೃಷಿ ಸರ್ವೋದಯ ಫೌಂಡೇಶನ್ ಮೂಲಕ ಅನುಷ್ಠಾನ
- ಸಂಸ್ಥೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಉಚಿತ ತರಬೇತಿ. ಅರ್ಜಿಸಲ್ಲಿಸಲು ಕಡೆಯ ದಿನಾಂಕ ೨೦೨೩ ಜುಲೈ ೨೧
- ಹೆಚ್ಚಿನ ಮಾಹಿತಿಗಾಗಿ ೮೬೬೦೨೧೭೭೩೯ ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಿ
ವರದಿ:ಹೊಯ್ಸಳ ಪಥ
