- ಸರ್ಕಾರಿ ಸಂಸ್ಥೆಗಳಲ್ಲಿ NABL ಮಾನ್ಯತೆ ಹೊಂದುವುದು ಅತಿ ಅಪರೂಪ
- ಕರ್ನಾಟಕದ ೧೯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಮಾನ್ಯತೆ ಪಡೆದ ಮೊದಲ ಸಂಸ್ಥೆ ಹಿಮ್ಸ್
- ಆಸ್ಪತ್ರೆ ಲ್ಯಾಬ್‌ಗಳ ಗುಣಮಟ್ಟವು ಅಂತರಾಷ್ಟ್ರಿಯ ಮಟ್ಟವನ್ನು ಹೊಂದಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ಮಾನ್ಯತೆ ಪ್ರಮಾಣ ಪತ್ರ
- ಸಂಸ್ಥೆಯ ಸಿಬ್ಬಂದಿಗಳ ಸತತ ಮೂರು ವರ್ಷಗಳ ಪ್ರಯತ್ನದಿಂದ NABL ಮಾನ್ಯತೆ ಹೊಂದುವ ಸಂಸ್ಥೆಯ ಕನಸು ನನಸು
ಹಿಮ್ಸ್ ಸಂಸ್ಥೆಯು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಅತ್ಯುತ್ತಮ ತಂಡವಾಗಿ ಕಾರ್ಯನಿರ್ವಹಿಸಿ ಬಹುತೇಕ ಎಲ್ಲಾ ಪ್ರಮುಖ ರಾಷ್ಟ್ರಮಟ್ಟದ ಮಾನ್ಯತೆಗಳನ್ನು ಹಿಮ್ಸ್ ಸಂಸ್ಥೆಯು ಪಡೆದಂತಾಗಿದ್ದು, ಸಂಸ್ಥೆಯ ಈ ಸಾಧನೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವಿದ್ ಅಕ್ತರ್‌ರವರು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿದ್ದ ಶ್ರೀ ನವೀನ್ ರಾಜ್ ಸಿಂಗ್, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ರಮೇಶ್, ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಡಾ. ಸುಜಾತ ರಾಥೋಡ್ ಮೆಚ್ಚಿಗೆ ಸಂದೇಶ ಕಳುಹಿಸಿದ್ದಾರೆ.
ಹಿಮ್ಸ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಸೇರಿದ ಕ್ಲಿನಿಕಲ್ ಪೆಥಲಜಿ, ಮೈಕ್ರೋ ಬಯಾಲಜಿ, ಬಯೋಕೆಮಿಸ್ಟ್ರಿ, ಹಿಸ್ಟೋ ಪೆಥಾಲಜಿ ವಿಭಾಗಗಳ ಬಹುತೇಕ ಎಲ್ಲಾ ಪರೀಕ್ಷೆಗಳನ್ನು ಕಠಿಣ ಮೌಲ್ಯಮಾಪನಕ್ಕೆ ಒಳಪಡಿಸಿ NABL ಮಾನ್ಯತೆ ಮಂಡಳಿಯ ಕಟ್ಟುನಿಟ್ಟಾದ ಗುಣಮಟ್ಟದ ಮಾನದಂಡಗಳು, ಉನ್ನತ ಮಟ್ಟದ ಮೂಲಭೂತ ಸೌಕರ್ಯಗಳು, ಗುಣಮಟ್ಟದ ಉಪಕರಣಗಳು, ಲ್ಯಾಬ್ ವರದಿಗಳ ವಿಶ್ವಾಸಾರ್ಹತೆ, ರೋಗಿಗಳ ಸೇವೆಗಳ ಬಗೆಗಿನ ಮಾರ್ಗಸೂಚಿಗಳು, ಪ್ರತಿಯೊಬ್ಬ ಲ್ಯಾಬ್ ಸಿಬ್ಬಂದಿಯ ಕಾರ್ಯಕ್ಷೇತ್ರದ ಬಗೆಗಿನ ತಿಳುವಳಿಕೆ ಹಾಗೂ ಕಾರ್ಯಕ್ಷಮತೆ, ಮೊದಲಾದ ಹಲವಾರು ವಿಚಾರಗಳಲ್ಲಿ ಮೌಲ್ಯಮಾಪನ ನಡೆಸಿ ಎಲ್ಲವೂ ತೃಪ್ತಿಕರವಾಗಿರುವ ಬಗ್ಗೆ ದೃಢಪಡಿಸಿಕೊಂಡು ಹಿಮ್ಸ್ ಕೇಂದ್ರೀಯ ಪ್ರಯೋಗಾಲಯಕ್ಕೆ NABL ಮಾನ್ಯತೆ ಪ್ರಮಾಣ ಪತ್ರ ದೊರೆತಿದೆ.
ಸಂಸ್ಥೆಯ ಈ ಸಾಧನೆಗೆ ಕಾರಣರಾದ NABL ನೋಡೆಲ್ ಅಧಿಕಾರಿಯಾದ ಡಾ.ಪುರುಷೋತ್ತಮ್ ಹಾಗೂ ಅವರಿಗೆ ಸಹಕಾರ ನೀಡಿದ ಡಾ.ನಾಗೇಶ್, ಡಾ.ವೆಂಕಟೇಶ್, ಡಾ.ಶಶಿಧರ್, ಡಾ.ವಿಠಲ್, ಡಾ.ಶ್ರೀಧರ್ ಮತ್ತು ಎಲ್ಲಾ ಲ್ಯಾಬ್ ಸಿಬ್ಬಂದಿಗಳನ್ನು ಹಾಗೂ ಲ್ಯಾಬ್ ತಾಂತ್ರಿಕ ಅಧಿಕಾರಿಗಳನ್ನು ಸಂಸ್ಥೆಯ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿ, ವೈದ್ಯಕೀಯ ಅಧೀಕ್ಷಕರು, ಹಾಗೂ ಇತರ ಎಲ್ಲಾ ಅಧಿಕಾರಿಗಳು, ಮತ್ತು ಸಿಬ್ಬಂದಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದಾರೆ.
NABL ಮಾನ್ಯತೆಯಿಂದ ನಮ್ಮ ಪ್ರಯೋಗಾಲಯದ ಸೇವೆಗಳನ್ನು ಬಳಸುವ ರೋಗಿಗಳು, ವೈದ್ಯರು ಹಾಗೂ ಸಾರ್ವಜನಿಕರು ಪ್ರಯೋಗಾಲಯದ ಪರೀಕ್ಷಾ ಫಲಿತಾಂಶಗಳ ನಿಖರತೆ ಹಾಗೂ ಗುಣಮಟ್ಟದ ಬಗ್ಗೆ ಸಂಪೂರ್ಣ ವಿಶ್ವಾಸವನ್ನು ಹೊಂದಬಹುದಾಗಿದೆ. ವರದಿಗಳಿಗೆ ಜಗತ್ತಿನಾದ್ಯಂತ ಮನ್ನಣೆ ದೊರೆಯುವುದರಿಂದ ಜಾಗತಿಕ ಸಂಶೋಧನೆಗಳಲ್ಲಿ ಸಂಸ್ಥೆಯು ಪಾಲ್ಗೊಳ್ಳಬಹುದಾಗಿದೆ. ಹಾಗೂ ಎಲ್ಲಾ ಆರೋಗ್ಯ ವಿಮೆ ಕಂಪನಿಗಳು ನಮ್ಮ ಪ್ರಯೋಗಾಲಯ ಸಂಬಂಧಿತ ವೈದ್ಯಕೀಯ ವೆಚ್ಚ ಪಾವತಿಗೆ ಸಮ್ಮತಿಸುತ್ತವೆ.
ಡಾ.ರವಿಕುಮಾರ್ ಬಿ.ಸಿ, ಹಿಮ್ಸ್ ನಿರ್ದೇಶಕರು