ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜು ಅರಸು : ತಾಲ್ಲೂಕು ದಂಡಾಧಿಕಾರಿ ಎಂ. ಮಮತ

( Alur) ಆಲೂರು : ದೀನದಲಿತರ ಬಂಧು, ಆದರ್ಶ ರಾಜಕಾರಣಿ, ಹಿಂದುಳಿದ ಹರಿಕಾರ ಡಿ. ದೇವರಾಜು ಅರಸು (D Devaraj Aras) ಎಂದು ತಾಲ್ಲೂಕು ದಂಡಾಧಿಕಾರಿಗಳಾದ ಎಂ.ಮಮತರವರು (M Mamatha) ಅಭಿಪ್ರಾಯಪಟ್ಟರು.
ಅವರು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಡಿ. ದೇವರಾಜು ಅರಸುರವರ ೧೦೮ ನೆಯ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಸಮಾಜಕ್ಕೆ ಕಂಟಕವಾಗಿದ್ದ ಜೀತಪದ್ದತಿ, ಮಲಹೊರುವ ಪದ್ದತಿ ಮುಂತಾದ ಹಲವು ಅನಿಷ್ಟಗಳನ್ನು ತೊಡೆದುಹಾಕಿದ್ದಲ್ಲದೇ ಭೂಹಿಡುವಳಿ ಪದ್ದತಿಗಳನ್ನು ತಿದ್ದಪಡಿಗೆ ತರುವುದರ ಮೂಲಕ ಸಮಸಮಾಜದ ಕನಸನ್ನು ನನಸಾಗಿಸಿದ ಮಹಾನ್ ಚೇತನ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಶ್ರೇಯೋಭಿವೃದ್ಧಿ ಬಯಸಿದ ಜನನಾಯಕ ಡಿ.ದೇವರಾಜ ಅರಸುರವರೆಂದರು.

ಪ್ರಧಾನ ಭಾಷಣಕಾರ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ ಹೊಲದಲ್ಲಿ ಉಳುಮೆ ಮಾಡುತ್ತಾ, ಹಸುಗಳ ಹಾಲು ಕರೆದು ಮಾರಾಟ ಮಾಡುತ್ತಾ, ಅಖಾಡದಲ್ಲಿ ಕುಸ್ತಿಪಟುವಾಗಿ ಮೆರಿತಾಯಿದ್ದ ವ್ಯಕ್ತಿಯೊಬ್ಬ ಮುಂದೊಂದು ದಿನ ಕರ್ನಾಟಕದ ಬೆಳಕಾಗಿಬಿಟ್ಟ. ಆ ಅಮೂಲ್ಯ ಬೆಳಕೇ ಕರ್ನಾಟಕ ಕಂಡ ಅಧಮ್ಯ ಚೇತನ, ಮಹಾಮಾನವತಾವಾದಿ, ದೀನ ದಲಿತರ ಬಂಧು, ಭೂಸುಧಾರಣೆಯ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜು ಅರಸುರವರು. ೧೯೪೧ ರಲ್ಲಿ ತನ್ನ ೨೬ ನೇ ವಯಸ್ಸಿಗೆ ಮೈಸೂರು ಪ್ರಜಾಪ್ರತಿನಿಧಿ ಚುನಾವಣೆಗೆ ನಿಂತು ರಾಜಕೀಯ ಪ್ರವೇಶ ಮಾಡಿದ ಅರಸರು ೧೯೫೨ ರಿಂದ ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದಿಂದ ಸತತ ಆರುಬಾರಿ ಶಾಸಕರಾಗಿ ಆಯ್ಕೆಯಾಗಿ ಮೈಸೂರು ರಾಜ್ಯದ ಎಂಟನೆಯ ಮುಖ್ಯಮಂತ್ರಿಯಾಗಿ, ಅಖಂಡ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ, ಸೇವೆ ಸಲ್ಲಿದ್ದಾರೆ. ಗರೀಬಿ ಹಠಾವೋ, ಭೂ ಸುಧಾರಣಾ ಕಾಯ್ದೆ, ಜೀತ ಪದ್ದತಿ ನಿರ್ಮೂಲನೆ, ವಸತಿ ನಿಲಯಗಳ ಸ್ಥಾಪನೆ, ನಿರುದ್ಯೋಗಿ ಯುವಕರಿಗೆ ಮಾಶಾಸನ, ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ, ಮೈಸೂರು ರಾಜ್ಯಕ್ಕೆ ೧೯೭೩ ನವೆಂಬರ್ ೦೧ ರಂದು ಕರ್ನಾಟಕ ಎಂಬ ಹೊಸ ನಾಮಕರಣ, ಬಡ ಹಾಗೂ ಶೋಷಿತ ವರ್ಗದ ಮನೆಗಳಿಗೆ ಉಚಿತ ಭಾಗ್ಯಜ್ಯೋತಿ ಯೋಜನೆ ಹೀಗೆ ನೂರಾರು ಜನಾನುರಾಗಿ ಕಾರ್ಯಕ್ರಮಗಳ ಮುಖೇನ ತನ್ನ ರಾಜಕೀಯ ಗುರುಗಳಾದ ಸಾಹುಕಾರ ಚೆನ್ನಯ್ಯ ಮತ್ತು ಶಾಂತವೇರಿ ಗೋಪಾಲಗೌಡರ ಸಮಾಜವಾದ ಸಿದ್ಧಾಂತವನ್ನು ಎತ್ತಿಹಿಡಿದು ಕುವೆಂಪು ವಾಣಿಯಂತೆ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ ಕೀರ್ತಿ ಡಿ. ದೇವರಾಜು ಅರಸುರವರಿಗೆ ಸಲ್ಲುತ್ತದೆ ಎಂದರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಯಾದ ಎ.ಟಿ.ಮಲ್ಲೇಶ್, ಪಟ್ಟಣ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಆರಕ್ಷಕ ಉಪ ನಿರೀಕ್ಷಕರಾದ ಜಾನಾಬಾಯಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ.ಕೆ. ಪುಟ್ಟಸ್ವಾಮಿ,  ಕಸಾಪ ಮಾಜಿ ಅಧ್ಯಕ್ಷ ಫಾ.ಹೈ.ಗುಲಾಂ ಸತ್ತಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಛೇರಿ ಪ್ರಥಮ ದರ್ಜೆ ಸಹಾಯಕ ಆನಂದ್, ಚೇತನ್, ಎಂ. ಬಿ. ವಿಜಯಕಾಂತ, ಈರಯ್ಯ, ಬಸವರಾಜ್, ಡಾ. ಎಂ.ಇ.ಜಯರಾಜ್, ಟಿ.ಕೆ.ನಾಗರಾಜ್, ಟಿ.ಕೆ.ಕುಮಾರಸ್ವಾಮಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Post a Comment

Previous Post Next Post