ತನ್ನಂತೆಯೇ ಇದ್ದ ವ್ಯಕ್ತಿ ಸತ್ತೆ ಎಂದು ತೋರಿಸಲು ಪ್ರಯತ್ನಿಸಿದ ವ್ಯಕ್ತಿ ಪೊಲೀಸರ ವಶ

ಅಪಘಾತದಿಂದ ಸತ್ತರೆ ಕೋಟಿಗಟ್ಟಲೆ ಜೀವ ವಿಮೆ ಹಣ ಕ್ಲೈಂ ಮಾಡಬಹುದೆಂದು ಭಾವಿಸಿ, ತನ್ನಂತೆಯೇ ಇರುವ ಅಮಾಯಕ ವ್ಯಕ್ತಿಯನ್ನು ಕೊಲೆ ಮಾಡಿ, ಅಪಘಾತದಿಂದ ಸತ್ತಿದ್ದಾನೆ ಎಂದು ತೋರಿಸಲು ಪ್ರಯತ್ನಿಸಿರುವ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದಾರೆ.

ಹಣದಾಸೆಗೆ ಈತನ ಕೃತ್ಯಕ್ಕೆ ಕೈಜೋಡಿಸಿದ ಟ್ರಕ್ ಚಾಲಕನು ಸಹ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಮುನಿಸ್ವಾಮಿಗೌಡ (೪೯) ಮತ್ತು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಹೋಬಳಿಯ ಕರಕುಚ್ಚಿ ಗ್ರಾಮದ ಟ್ರಕ್ ಡ್ರೈವರ್ ದೇವೇಂದ್ರ ನಾಯಕ ಬಂಧಿತ ಆರೋಪಿಗಳು.


ಘಟನೆ ಹಿನ್ನೆಲೆ: ಕಳೆದ ಆ.೧೩ ರಂದು ಬೆಳಗಿನ ಜಾವ ೩.೧೫ರ ಸುಮಾರಿಗೆ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿ ಗೇಟ್ ಹತ್ತಿರ ಟವೆರಾ ಕಾರಿನ ಸ್ಟೆಪ್ನಿ ಬದಲಾಯಿಸುವಾಗ ಲಾರಿ ಗುದ್ದಿ ಸಾವು ಸಂಭವಿಸಿದೆ ಎಂದು ದೂರು ಬಂದಿತ್ತು. ನಂತರ ಗಂಡಸಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಬಳಿಕ ಹೊಸಕೋಟೆ ನಗರದ ಶಿಲ್ಪಾರಾಣಿ ಬಂದು ಅಪಘಾತದಲ್ಲಿ ಮೃತಪಟ್ಟಿರುವುದು ನನ್ನ ಗಂಡ ಮುನಿಸ್ವಾಮಿಗೌಡ ಎಂದು ಹೇಳಿ ಮೃತದೇಹ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿ ಮುನಿಸ್ವಾಮಿಗೌಡನನ್ನು ಬಲಿ ಪಡೆದ ಲಾರಿ ಚಾಲಕನ ಬಗ್ಗೆ ತನಿಖೆ ಕೈಗೊಂಡರು. 

ತನಿಖೆ ವೇಳೆ ಮುನಿಸ್ವಾಮಿಗೌಡ ಅಪಘಾತದಿಂದ ಮೃತಪಟ್ಟಿಲ್ಲ ಎಂಬ ವಿಷಯ ತಿಳಿಯಿತು. ಹೀಗಾಗಿ ಕಲಂ ೧೦೩(೧), ೨೩೮ ಬಿ.ಎನ್.ಎಸ್. ಕಾಯಿದೆ ರೀತಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಆರೋಪಿಗಳ ಪತ್ತೆಗಾಗಿ ಹಾಸನ ಎಸ್ಪಿ ಅವರ ನೇತೃತ್ವದಲಿ, ಎಎಸ್ಪಿ, ಡಿವೈಎಸ್ಪಿ ಅರಸೀಕೆರೆ ಅವರ ಮಾರ್ಗದರ್ಶನದಲ್ಲಿ ಗಂಡಸಿ ಸಿಪಿಐ ರಾಘವೇಂದ್ರ ಪಕ್ರಾಶ್,ಬಾಣಾವರ ಪಿಎಸ್‌ಐ ಸುರೇಶ್, ಗಂಡಸಿ ಪಿಎಸ್‌ಐ ಆರತಿ, ಮತ್ತು ಸಿಬ್ಬಂದಿ ತನಿಖೆ ಚುರುಕುಗೊಳಿಸಿದರು. ಕಡೆಗೆ ಅಪಘಾತ ಮಾಡಿದ ಲಾರಿ ಚಾಲಕ ದೇವೇಂದ್ರನಾಯಕ್ ಸಿಕ್ಕಿ ಬಿದ್ದ. ಆತನನ್ನು ವಿಚಾರಣೆಗೆ ಒಳ ಪಡಿಸಿದಾಗ ಅಪಘಾತದಲ್ಲಿ ಸತ್ತ ವ್ಯಕ್ತಿಯೇ ಬೇರೆ. 

ಮುನಿಸ್ವಾಮಿಗೌಡ ಬದುಕಿದ್ದಾನೆ ಎಂದು ತಿಳಿಸಿದ. ಚಾಲಕ ನೀಡಿದ ಮಾಹಿತಿ ಮೇರೆಗೆ ಮುನಿಸ್ವಾಮಿಗೌಡ ಇರುವ ಜಾಗ ಪತ್ತೆ ಮಾಡಿ ಆತನನ್ನು ತನಿಖಾ ತಂಡ ವಶಕ್ಕೆ ಪಡೆಯಿತು. ಬಳಿಕ ಆತನನ್ನು ವಿಚಾರಣೆಗೆ ಒಳ ಪಡಿಸಿದಾಗ ತಾನು ಹೊಸಕೋಟೆಯಲ್ಲಿ ಟೈರ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೆ. ಅಂಗಡಿಯಲ್ಲಿ ನಷ್ಟವಾಗಿತ್ತು. ಆ ನಷ್ಟವನ್ನು ಸರಿದೂಗಿಸಲು ಮತ್ತು ಕೆಲವರ ಬಳಿ ಪಡೆದುಕೊಂಡಿದ್ದ ಕೈಸಾಲ ತೀರಿಸುವುದು ಕಷ್ಟವಾಗಿತ್ತು. ಸಾಲ ತೀರಿಸಿ, ಆರ್ಥಿಕ ನಷ್ಟ ಸರಿ ದೂಗಿಸಿಕೊಳ್ಳಲು ಈಗಾಗಲೇ ಜೀವ ವಿಮಾ ನಿಗಮದಲ್ಲಿ ಹಲವು ಜೀವ ವಿಮಾ ಪಾಲಿಸಿ ಮಾಡಿಸಿದ್ದು.

ಅದರಲ್ಲಿ ವಿಶೇಷವಾಗಿ ಡಬಲ್ ಆಕ್ಸಿಡೆಂಟ್ ಬೆನಿಫಿಟ್(ಡಿಎಬಿ) ಮಾಡಿಸಿದ್ದು, ಅಪಘಾತದಲ್ಲಿ ಮೃತಪಟ್ಟರೆ ಕೋಟಿಗಟ್ಟಲೆ ಹಣ ಬರಲಿದೆ ಎಂದು ತಿಳಿದು, ಅಪರಿಚಿತ ವ್ಯಕ್ತಿಯನ್ನು ಕರೆ ತಂದು, ಇತರರ ಸಹಾಯದಿಂದ ಅಪರಿಚಿತ ವ್ಯಕ್ತಿಯ ಮೇಲೆ ಲಾರಿ ಹತ್ತಿಸಿ ಕೊಲೆ ಮಾಡಿ, ಆತನೇ ಮುನಿಸ್ವಾಮಿಗೌಡ ಎಂದು ಬಿಂಬಿಸಿದ್ದ. ಇನ್ಷೂರೆನ್ಸ್ ಹಣ ಪಡೆಯಲು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಮೊಹಮದ್ ಸುಜೀತಾ ತಿಳಿಸಿದ್ದಾರೆ.

Post a Comment

Previous Post Next Post