ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ಎಲ್ಲರ ಸಹಕಾರ ಅಗತ್ಯ : ಡಿಸಿ ಸಿ.ಸತ್ಯಭಾಮ ಕರೆ

ಹಾಸನ: ಹಾಸನ ಜಿಲ್ಲೆಯನ್ನು ಶೇ. 100 ಶೇಕಡಾ ಸಾಕ್ಷರ ಜಿಲ್ಲೆಯಾಗಿ ತಲುಪಿಸಲು ಸರ್ಕಾರದ ಸಾಕ್ಷರತಾ ಕಾರ್ಯಕ್ರಮದೊಂದಿಗೆ ಸಂಘ ಸಂಸ್ಥೆಗಳು ಮತ್ತು ಸ್ವಯಂ ಸೇವಕರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹೇಳಿದ್ದಾರೆ.

ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ಎಲ್ಲರ ಸಹಕಾರ ಅಗತ್ಯ : ಡಿಸಿ ಸಿ.ಸತ್ಯಭಾಮ ಕರೆ
ಸಾಕ್ಷರತಾ ಪ್ರಮಾಣವಚನ ಬೋಧಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ

ಮಂಗಳವಾರ, ನಗರದ ವಾರ್ತಾ ಭವನದ ಆವರಣದಲ್ಲಿ ಲೋಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಸಾಕ್ಷರತಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿತ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಸಂದರ್ಭದಲ್ಲಿ, ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ, ಸಾಕ್ಷರತಾ ಪ್ರಮಾಣವಚನ ಬೋಧಿಸಿದರು.

“ನಮ್ಮ ಜಿಲ್ಲೆಯಲ್ಲಿ ಇನ್ನೂ ಅನಕ್ಷರಸ್ಥರನ್ನು ಗುರುತಿಸಲು ಸಮೀಕ್ಷೆ ನಡೆಯುತ್ತಿದೆ. ನಮ್ಮ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 79 ರಿಂದ 80ರ ನಡುವಾಗಿರುವುದಾಗಿ ಅಂದಾಜಿಸಲಾಗಿದೆ, ಮತ್ತು ರಾಜ್ಯದ ಪ್ರಮಾಣವೂ ಶೇ. 80ರ ಸುತ್ತಮುತ್ತ ಇರುವುದಾಗಿ ವರದಿಯಾಗಿದೆ. ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಎಲ್ಲರ ಸಹಕಾರ ಅವಶ್ಯಕವಾಗಿದೆ. ಅನಕ್ಷರಸ್ಥರಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು” ಎಂದು ಅವರು ಹೇಳಿದರು.

ಹೊಳೆನರಸೀಪುರ ರಸ್ತೆ ಬದಿ ವ್ಯಾಪಾರಿಗಳ ಗೋಳು ಕೇಳುವರಾರು

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು, “ರಾಜ್ಯದಲ್ಲಿ ಒಟ್ಟಾರೆ ಶೇ. 77.72 ಮಟ್ಟದ ಸಾಕ್ಷರತೆ ಇದೆ. 1978-79 ರಲ್ಲಿ ಸಾಕ್ಷರತಾ ಆಂದೋಲನ ಆರಂಭವಾಗಿದ್ದು, ಈ ವರ್ಷ ಜಿಲ್ಲೆಯಲ್ಲಿ 30 ಸಾವಿರ ಜನರನ್ನು ನವಸಾಕ್ಷರರನ್ನಾಗಿಸಿದೆ. ಗ್ರಾ.ಪಂ.ದ 223 ಸದಸ್ಯರು ಸಾಕ್ಷರತಾ ಯೋಜನೆಯಡಿ ಅಕ್ಷರ ಕಲಿತಿದ್ದಾರೆ. ಪ್ರತಿವರ್ಷವೂ ಈ ಕಾರ್ಯ ನಡೆಯುತ್ತಿದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕಿ ಮೀನಾಕ್ಷಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಎಸ್.ಎಸ್. ಪಾಷಾ, ಶಬ್ಬೀರ್ ಅಹಮದ್, ಬಿ.ಟಿ. ಮಾನವ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಅವರು ಸಾಕ್ಷರತಾ ಗೀತೆಗಳನ್ನು ಹಾಡಿದರು.



Post a Comment

Previous Post Next Post