ಒಳ ಮೀಸಲಾತಿ ವರ್ಗಿಕರಣ ಜಾರಿಗೆ ಬೃಹತ್ ತಮಟೆ ಚಳುವಳಿ

ಹಾಸನ : ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ದವಾದ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ವೇಳೆ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ವಿ.ಆರ್.ಪ್ರಕಾಶ್ ಮಾತನಾಡಿ, ಸುಪ್ರೀಂಕೋರ್ಟ್ ಒಳಮೀಸಲಾತಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಆಗಸ್ಟ್‌ನಲ್ಲಿ ಆದೇಶ ನೀಡಿದೆ. ಆದರೆ ತಿಂಗಳು ಕಳೆದರೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ತಡಮಾಡುತ್ತಿದೆ. ಒಳಮೀಸಲಾತಿ ಜಾರಿಗಾಗಿ ಕಳೆದ ೩೦ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದು, ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಅಲ್ಲದೆ ಇದು ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಉಪ ಜಾತಿಗಳಿಗೆ ಒಳ ಮೀಸಲಾತಿ ನೀಡಿದರೆ ಸಮುದಾಯದ ಅಭಿವೃದ್ದಿ ಸಾಧ್ಯವಾಗುತ್ತದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಒಳಮೀಸಲಾತಿ ನೀಡುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದ್ದರು. ಆದರೆ ಒಳಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆದು ಆದೇಶ ನೀಡಿದ್ದರೂ ಮುಖ್ಯಮಂತ್ರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಆದ್ದರಿಂದ ಸರ್ಕಾರವನ್ನು ಬಡಿದೆಬ್ಬಿಸಲು ತಮಟೆ ಚಳುವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಸಾಂಕೇತಿಕವಾಗಿ ಆಯೋಜನೆ ಮಾಡಿರುವ ತಮಟೆ ಚಳುವಳಿಗೆ ಮಾದಿಗ ದಂಡೋರ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ದಸಂಸ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮನವಿ ಮಾಡುತ್ತಿದ್ದೇವೆ, ಈ ಚಳುವಳಿಗೂ ಸರ್ಕಾರ ಮಣಿಯದಿದ್ದರೆ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾದಿಗ ದಂಡೋರ ಜಿಲ್ಲಾಧ್ಯಕ್ಷರಾದ ತೆರಣ್ಯ ವಿಜಯ್ ಕುಮಾರ್ ಮಾತನಾಡಿ, ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದರೂ ರಾಜ್ಯ ಸರ್ಕಾರ ಜಾಣಕುರುಡು ವಹಿಸುತ್ತಿದೆ. ಕಳೆದ ಮೂರೂ ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ ಹಾಗಿನಿಂದಲೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನೊಂದವರ ಕೂಗು ಕೇಳಲೇ ಇಲ್ಲ. ಆದರೀಗ ಒಳ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದರಂತೆ, ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ಜಾರಿ ಮಾಡಬೇಕು, ಈ ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಚಿತ್ರದುರ್ಗದಲ್ಲಿ ನಡೆದ ಎಸ್ಸಿ, ಎಸ್ಟಿಗಳ ಸಮಾವೇಶದಲ್ಲಿ ಖರ್ಗೆ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ ಎಂದು ತಿಳಿಸಿದ್ದರು. ಅದರಂತೆ ದಲಿತ ಸಮುದಾಯದ ಕಾಂಗ್ರೆಸ್ ಪಕ್ಷಕ್ಕೆ ಒಕ್ಕೊರಲ ಬೆಂಬಲ ನೀಡಿತ್ತು, ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರದ ಮುಖ್ಯಸ್ಥರಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡಬೇಕು. ಹಾಗೂ ಜಾರಿ ಮಾಡಿ ತಾವು ಸಾಮಾಜಿಕ ಬದ್ಧತೆಯುಳ್ಳ ರಾಜಕಾರಣಿ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿಕೊಳ್ಳಬೇಕು. ಇನ್ನು ಎಸ್ಸಿ ಜಾತಿಯಲ್ಲಿರುವ ೧೦೧ ಜಾತಿಗಳ ಪೈಕಿ ಸುಮಾರು ೮೯ ಜಾತಿಗಳು ಪರವಾಗಿದ್ದು, ಈ ಒಳಮೀಸಲಾತಿ ಜಾರಿ ಮಾಡಬೇಕು ಎಂದು ತಮಟೆ ಚಳುವಳಿಯ ಮುಖಾಂತರ ಜಿಲ್ಲಾಧಿಕಾರಿಗಳ ಮುಖೇನ ಸರ್ಕಾರಕ್ಕೆ ಆಗ್ರಹ ಪಡಿಸುತ್ತೆದ್ದೆವೆ ಎಂದರು.

ಅರಸೀಕೆರೆ ತಾಲೂಕು ಸಂಚಾಲಕರಾದ ಬಾಣಾವರ ಮಹೇಶ್ ಮಾತನಾಡಿ, ದಶಕಗಳಿಂದ ಯಾವುದೇ ಸೌಲಭ್ಯ ಸರಿಯಾಗಿ ಸಿಗದೆ ವಂಚಿತರಾಗುತ್ತಿರುವ ನಮಗೆ ಒಳಮೀಸಲಾತಿ ಅನಿವಾರ್ಯವಿದೆ. ಒಳಮೀಸಲಾತಿಯನ್ನು ಸರ್ಕಾರ ಕಡ್ಡಾಯವಾಗಿ ಜಾರಿ ಮಾಡಬೇಕು. ಮೀಸಲಾತಿ ಜಾರಿಗಾಗಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ಮಾಡಬೇಕಾದ ಅನಿವಾರ್ಯ ಬರುವಂತೆ ಸರ್ಕಾರ ಮಾಡಿಕೊಳ್ಳಬಾರದು ಆದಷ್ಟು ಬೇಗನೆ ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿ: ಹಾಸನ ಸಂಸದರ ಹೊಸ ಕಚೇರಿಯ ಉದ್ಘಾಟನೆ - ಕೆ.ಎನ್. ರಾಜಣ್ಣ, ಶ್ರೇಯಸ್ ಪಟೇಲ್ ಉಪಸ್ಥಿತಿ

ಹಿರಿಯ ದಲಿತ ಮುಖಂಡರಾದ ಶಂಕರ್ ರಾಜು ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದಲೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಳ ಮೀಸಲಾತಿ ಜಾರಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಶತಶತಮಾನಗಳಿಂದಲೂ ಶೋಷಣೆ, ಹಿಂಸೆ, ದೌರ್ಜನ್ಯ ಬಹಿಷ್ಕಾರವನ್ನು ಅನುಭವಿಸಿಕೊಂಡು ಬರುತ್ತಿರುವ ದಲಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿರುವುದರಿಂದ ರಾಜ್ಯ ಸರ್ಕಾರ ವಿಳಂಭ ಮಾಡದೆ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ತಡ ಮಾಡಿದರೆ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು

ತಮಟೆ ಚಳುವಳಿ ವೇಳೆ, ಹಿರಿಯ ಮುಖಂಡರಾದ ಶಿವಮೂರ್ತಿ,ಕೃಷ್ಣ ದಾಸ್ , ಜಿಲ್ಲಾ ಸಂಘಟನಾ ಸಂಚಾಲಕರಾದ ದೇಶಾಣಿ ಶಂಕರಪ್ಪ, ಗೋವಿಂದರಾಜ್ ಹೊಸೂರು, ನಾಗವೇದಿ ಸಿದ್ದೇಶ, ಕೊಟ್ರೇಶ್ ನರಸೀಪುರ, ಪ್ರಭು ಅರೇಹಳ್ಳಿ, ಭಾಸ್ಕರ್, ನಾಗರಾಜ್ ಚಿಕ್ಕರಳ್ಳಿ, ನಂಜಪುರ ಆನಂದ್, ಗೂನ್ದಕಾನಳ್ಳಿ ರಾಜು, ಪುಟ್ಟರಾಜು, ರೇಣುಕಪ್ಪ, ನಿಡುಗಾರ ಹಳ್ಳಿ ಸಿದ್ದಪ್ಪ, ಪುಟ್ಟಸ್ವಾಮಯ್ಯ, ರಂಗಯ್ಯ, ಗವಿ ರಂಗಯ್ಯ, ನಾಗೇಶ್, ಮಂಜುನಾಥ್, ಆಲೂರು ಮಂಜಪ್ಪ, ಕೆ.ಪಿ.ಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



Post a Comment

Previous Post Next Post