ಆಲೂರು ತಾಲ್ಲೂಕಿನ ನೂತನ ಅಧ್ಯಕ್ಷೆ ತಾಹೀರ ಬೇಗಂ ಅಧ್ಯಕ್ಷತೆಯಲ್ಲಿ ಮೊದಲ ಸಭೆ

 ಆಲೂರು: ಎರಡು ವರ್ಷಗಳ ನಂತರ ಆಲೂರು ಪಟ್ಟಣ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನೂತನ ಅಧ್ಯಕ್ಷೆ ತಾಹೇರ ಬೇಗಂ ರವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ನೂತನ ಆಡಳಿತ ಮಂಡಲಿ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿ ಸಭೆ ನಡೆದು ಪ್ರಮುಖ ವಿಚಾರಗಳ ಬಗ್ಗೆ ಸಕಾರಾತ್ಮಕ ನಿರ್ಣಯ ಕೈಗೊಳ್ಳಲಾಯಿತು.

ಸದಸ್ಯ ಹರೀಶ್ ಮಾತನಾಡಿ, ಪಟ್ಟಣದಲ್ಲಿ ಭೂತವಾಗಿ ಕಾಡುತ್ತಿರುವ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸಾರ್ವಜನಿಕರೊಟ್ಟಿಗೆ ಸೇರಿ ಪಟ್ಟಣ ಪಂಚಾಯಿತಿಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಯಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕೂಡಲೇ ಸೂಕ್ತ ಸ್ಥಳ ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಸ್ಟೀಫನ್ ಪ್ರಕಾಶ್, ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವನ್ನು ಗುರುತಿಸಿ ಪೊಲೀಸ್ ಇಲಾಖೆ ಸಹಾಯದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನು ಓದಿ: ಜಿಲ್ಲಾ ಅಭಿವೃದ್ಧಿಯೇ ನನ್ನ ಗುರಿ, ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ – ಸಂಸದ ಶ್ರೇಯಸ್ ಪಟೇಲ್

ಸದಸ್ಯ ಧರ್ಮ ಮಾತನಾಡಿ, ಪಟ್ಟಣ ಪಂಚಾಯಿತಿಯಿಂದ ಪರವಾನಿಗೆಯನ್ನು ಪಡೆಯದೆ ಮತ್ತು ಯಾವುದೇ ಬಾಡಿಗೆಯನ್ನು ಕಟ್ಟದೆ ಕಳೆದ 20 ವರ್ಷಗಳಿಂದ ಕೋಳಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು‌. ಕಳೆದ ಸಭೆಯಲ್ಲಿ ಕ್ಷೇತ್ರದ ಶಾಸಕರು ಹೇಳಿರುವಂತೆ ಪಟ್ಟಣ ಪಂಚಾಯಿತಿಯಿಂದ ಅವರಿಗೆ ಯಾವುದೇ ಮೂಲ ಸೌಕರ್ಯಗಳನ್ನು ನೀಡಕೂಡದು ಕೂಡಲೇ ಅವರಿಗೆ ನೀಡಿರುವ ನೀರಿನ ಸೌಲಭ್ಯವನ್ನು ಬಂದ್ ಮಾಡಬೇಕು ಹಾಗೂ ಕಸ ವಿಲೇಯ ಬಾರಿಗೆ ವಾಹನವನ್ನು ಕಳುಹಿಸಕೂಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನೂತನ ಅಧ್ಯಕ್ಷೆ ತಾಹೇರ ಬೇಗಂ ಈಗಾಗಲೇ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳಿಗೆ ಈ ಬಗ್ಗೆ ಗಮನಹರಿಸಿ ಕುಡಿಯುವ ನೀರು ಬಂದ್ ಮಾಡುವಂತೆ ಸೂಚಿಸಲಾಗಿದೆ, ಕೋಳಿ ಅಂಗಡಿ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ದಾಖಲಾಗಿದ್ದು ಸದ್ಯದಲ್ಲೇ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸದಸ್ಯ ತೌಫಿಕ್ ಅಹಮದ್ ಮಾತನಾಡಿ, ಪಟ್ಟಣ ಪಂಚಾಯಿತಿ ಯಲ್ಲಿರುವ ಪೌರಕಾರ್ಮಿಕರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಹೆಸರಿಗೆ ಮಾತ್ರ 21 ಜನ ಪೌರಕಾರ್ಮಿಕರಿದ್ದಾರೆ ಇವರ ಕೆಲಸದ ಬಗ್ಗೆ ಮುಖ್ಯ ಅಧಿಕಾರಿಗಳು ಹಾಗೂ ಅಧ್ಯಕ್ಷರು ಗಮನ ಹರಿಸಿ ಎಷ್ಟು ಸಮಯ ಕೆಲಸ ಮಾಡುತ್ತಿದ್ದಾರೆ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಪೂರ್ಣ ವಿವರ ಪಡೆಯಿರಿ, ಕೆಲ ವಾರ್ಡ್ ಗಳಲ್ಲಿನ ಚರಂಡಿಗಳಲ್ಲಿ ನೀರು ತುಂಬಿಕೊಂಡು ತಿಂಗಳುಗಟ್ಟಲೆ ಕಳೆದರೂ ಕ್ಲೀನ್ ಮಾಡದ ಕಾರಣ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

ಸದಸ್ಯೆ ಬಿ.ಪಿ ರಾಣಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಮತ್ತು ಮಂಗಗಳ ಹಾವಳಿ ಹೆಚ್ಚಾಗಿದೆ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸದಸ್ಯ ಸಂತೋಷ್ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಸುರಿದ ಅತಿವೃಷ್ಟಿ ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಈವರೆಗೂ ಪರಿಹಾರ ನೀಡದಿರುವುದು ವಿಪರ್ಯಾಸವೇ ಸರಿ, ಕೂಡಲೇ ಸಂಬಂಧಪಟ್ಟವರಿಗೆ ಸರ್ಕಾರ ನೀಡಿರುವ ಪರಿಹಾರ ಹಣವನ್ನ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ನೂತನ ಅಧ್ಯಕ್ಷೆ ತಾಹೇರ ಬೇಗಂ ಮಾಧ್ಯಮಗಳೊಂದಿಗೆ ಮಾತನಾಡಿ, ಪಟ್ಟಣದ ಅಭಿವೃದ್ಧಿ ದಿಸೆಯಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳ ಸಹಮತದೊಂದಿಗೆ ಉತ್ತಮ ಆಡಳಿತ ನೀಡಲು ಸಂಕಲ್ಪಿಸಿದ್ದೇನೆ ಪಟ್ಟಣದಲ್ಲಿ ತಲೆದೂರಿರುವ ಪಾರ್ಕಿಂಗ್, ಬೀದಿ ದೀಪ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಹರೀಶ್, ಧರ್ಮ, ಸಂತೋಷ್, ಅಬ್ದುಲ್ ಖುದ್ದೂಸ್, ಬಿ.ಪಿ ರಾಣಿ, ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಮುಖ್ಯ ಇಂಜಿನಿಯರ್ ಕವಿತಾ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

Post a Comment

Previous Post Next Post