ಆಲೂರು ತಾಲ್ಲೂಕಿನ ಆನಗಳಲೆ ಗ್ರಾಮದಲ್ಲಿ ಅಕ್ರಮ ಭೂ ಒತ್ತುವರಿ


 ಹಾಸನ: ಆಲೂರು ತಾಲ್ಲೂಕು, ಕೆ. ಹೊಸಕೋಟೆ ಹೋಬಳಿ ಆನಗಳಲೆ ಗ್ರಾಮದಲ್ಲಿ ಅಕ್ರಮ ಭೂ ಒತ್ತುವರಿ ಸರ್ವೆ ನಂ. ೩೫ ಹಾಗೂ ೪೬ ಸರ್ಕಾರಿ ಬೀಳು ಹಾಗೂ ಗ್ರಾಮಠಾಣಾ ಜಾಗವನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ/ಜನಾಂಗದವರಿಗೆ ನಿವೇಶನವನ್ನು ಕಾಯ್ದಿರಿಸಿ ಆಶ್ರಯ ಯೋಜನೆಯಡಿ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೆ ವೆಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಮಾಧ್ಯಮದೊಂದಿಗೆ ಮಾತನಾಡಿ, ಆಲೂರು ತಾಲ್ಲೂಕು, ಕೆ. ಹೊಸಕೋಟೆ ಹೋಬಳಿ ಆನಗಳಲೆ ಗ್ರಾಮದಲ್ಲಿ ಸುಮಾರು ೬೫ ದಲಿತ ವರ್ಗದ ಕುಟುಂಬಗಳು ವಾಸವಿದ್ದು, ಒಂದು ಮನೆಯಲ್ಲಿ ೨ ಅಥವಾ ೩ ಮಕ್ಕಳು ಸಂಸಾರ ನಡೆಸುತ್ತಿದ್ದಾರೆ. ಅವರುಗಳು ನಿವೇಶನ ರಹಿತರಾಗಿರುತ್ತಾರೆ. ಈ ನಿವೇಶನಕ್ಕಾಗಿ ಸುಮಾರು ೮-೧೦ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಯಾವು ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಳಿ ಇತ್ತ ಗಮನ ಹರಿಸಿರುವುದಿಲ್ಲ ಎಂದು ದೂರಿದರು. ಆನಗಳಲೆ ಗ್ರಾಮದ ಸರ್ವೆ ನಂ. ೩೫ ಹಾಗೂ ೪೬ ರಲ್ಲಿ ಸರ್ಕಾರಿ ಬೀಳು ಜಾಗವಾಗಿದ್ದು, ಸುಮಾರು ೫ ಎಕರೆ ವಿಸ್ತೀರ್ಣವಾಗಿದ್ದು, ಹಾಗೂ ಗ್ರಾಮಠಾಣಾ ಜಾಗವೂ ಸಹ ೫-೦೦ ಎಕರೆ ವಿಸ್ತೀರ್ಣದಲ್ಲಿದ್ದು, ಅದನ್ನು ಕೆಲವು ಬಲಾಡ್ಯ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುತ್ತಾರೆ ಎಂದರು. ತ್ವರಿತವಾಗಿ ತೆರವುಗೊಳಿಸುವಂತೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಸಹ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಯಾವುದೇ ಕ್ರಮವಹಿಸಿರುವುದಿಲ್ಲ. ಆದ್ದರಿಂದ ತಾವು ಗ್ರಾಮಠಾಣಾ ಜಾಗ ಹಾಗೂ ಸರ್ಕಾರಿ ಬೀಳು ಜಾಗವನ್ನು ತ್ವರಿತವಾಗಿ ತೆರವುಗೊಳಿಸಿ ನಿರಾಶ್ರಿತ ದಲಿತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಜಾಗವನ್ನು ನಿವೇಶನಕ್ಕಾಗಿ ಮೀಸಲಿರಿಸಿ ಆಶ್ರಯ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಹಕ್ಕುಪತ್ರ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ದಲಿತ ಮುಖಂಡ ಹೆಚ್.ಕೆ. ಸಂದೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ರಾಧಾಮಣಿ, ಜಿಲ್ಲಾ ಸಂಘಟನಾ ಸಂಚಾಲಕ ಹಾನುಬಾಳು ಗೋಪಾಲ್, ಚಂದ್ರು ಸಾಣೇನಹಳ್ಳಿ, ಆನಂದ್ ಅರಸೀಕೆರೆ, ಜಯಣ್ಣ ಚನ್ನರಾಯಪಟ್ಟಣ, ಚಿಕ್ಕಣ್ಣ ಆಲೂರು, ಚಂದ್ರಣ್ಣ ಅರಕಲಗೂಡು, ಉದಯ ರಾಗಿಪುರ ಸೇರಿದಂತೆ ಇತರರು ಭಾವಹಿಸಿದ್ದರು.


Post a Comment

Previous Post Next Post