ಹಾಸನ: ದಿ ರೂಲರ್ಸ್ ಸಂವಿಧಾನದ ಶಕ್ತಿಯ ಪ್ರತಿರೂಪವಾಗಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಚಿತ್ರ ದಿ ರೂಲರ್ಸ್ ಕುಟುಂಬ ಸಮೇತರಾಗಿ ನೀಡುವ ಚಿತ್ರವಾಗಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಚಿತ್ರದ ನಟ ಡಾ.ಸಂದೇಶ್ ಹೇಳಿದ್ದಾರೆ.
ನಗರದ ಪೃಥ್ವಿ ಚಿತ್ರ ಮಂದಿರದಲ್ಲಿ ಇಂದು ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸಾತೇನಹಳ್ಳಿ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ದಿ ರೂಲರ್ಸ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯಾದ್ಯಂತ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ ಹಾಸನ ಜಿಲ್ಲೆಯಲ್ಲೂ ಪ್ರತಿಯೊಬ್ಬರೂ ಜಾತ್ಯತೀತವಾಗಿ ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಚಿತ್ರ ವೀಕ್ಷಣೆ ಬಳಿಕ ಕೂಗುವ ಜೈ ಭೀಮ್ ಘೋಷಣೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಒಂದು ಜಾತಿ, ಅಥವಾ ಇಂದು ಸಮುದಾಯಕ್ಕೆ ಸೀಮಿತವಲ್ಲ ಹಾಗಿದ್ದಾಗ ಅವರ ಪರ ಕೂಗುವ ಘೋಷಣೆಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಎಸ್ಟು ಸರಿ ಎಂದು ಪ್ರಶ್ನಿಸಿದ ಅವರು, ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಇರುವವರೆಗೂ ಜೈ ಭೀಮ್ ಘೋಷಣೆ ಇದ್ದೆ ಇರುತ್ತದೆ ಎಂದರು.
ದಸಂಸ ಮುಖಂಡ ಹಾಗೂ ಪತ್ರಕರ್ತ ಹೆತ್ತೂರು ನಾಗರಾಜ್ ಮಾತನಾಡಿ, ದಿ ರೂಲರ್ಸ್ ನಮ್ಮೆಲ್ಲರ ಸಿನಿಮವಾಗಿದೆ, ಬಾಬಾ ಸಾಹೇಬರ ಅನುಯಾಯಿಗಳು, ವಿವಿಧ ಸಂಘಟನೆಗಳ ಮುಖಂಡರು ಚಿತ್ರವನ್ನು ವೀಕ್ಷಿಸಿ ಇತರರಿಗೂ ಚಿತ್ರ ವೀಕ್ಷಿಸುವಂತೆ ಕರೆ ನೀಡುವ ಮೂಲಕ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕು ಎಂದರು.
ಸಂವಿಧಾನದ ಶಕ್ತಿ ಎಂಬ ಶೀರ್ಷಿಕೆ ಅಡಿಯಲ್ಲಿ ನೈಜ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದ್ದು, ರಾಜ್ಯದ ಹಾಗೂ ದೇಶದ ಜನತೆಗೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದ್ದು ಪ್ರತಿಯೊಬ್ಬರು ಜಾತ್ಯತೀತವಾಗಿ ಧರ್ಮತೀತವಾಗಿ ಹಾಗೂ ಪಕ್ಷಾತೀತವಾಗಿ ಕುಟುಂಬ ಸಮೇತರಾಗಿ ಈ ಚಿತ್ರವನ್ನು ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಲ್ ರಾಮಸ್ವಾಮಿ ಅವರು ಮಾತನಾಡಿ, ವಿಶ್ವಕ್ಕೆ ಸರ್ವ ಶ್ರೇಷ್ಠ ಸಂವಿಧಾನ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜೀವನಾಧಾರಿತ ಚಿತ್ರ ವನ್ನು ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೂ ವೀಕ್ಷಿಸಲು ಅವಕಾಶ ಕಲ್ಪಿಸಬೇಕು, ಪ್ರಜಾ ಪ್ರಭುತ್ವಕ್ಕೆ ಶಕ್ತಿ ಬರಲು ಭಾರತೀಯ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು, ಹಾಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸಾತೇನಹಳ್ಳಿ ಶಿವ ಕುಮಾರ್,ಹಿರಿಯ ದಲಿತ ಹೋರಾಟಗಾರ, ಅಂಬುಗ ಮಲ್ಲೇಶ್, ವೈಚಾರಿಕ ಪತ್ರಿಕೆ ಸಂಪಾದಕ ವೆಂಕಟೇಶ್ ಬ್ಯಾಕರವಳ್ಳಿ, ಮುಖಂಡರಾದ ಮಂಜುನಾಥ್, ರಘು, ಮಧು, ಶರತ್, ನವೀನ್ ಗಿಣಿಯಪ್ಪ, ಬಿಎಸ್ಪಿ ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ. ದಸಂಸ ಮುಖಂಡರಾದ ಭಾಗ್ಯ ಕಲಿವೀರ್. ಕುಮಾರಸ್ವಾಮಿ, ಶಶಿಧರ್ ಮೌರ್ಯ, ತೊಟೆಷ್. ಅಶೋಕ್ ನಾಯಕರಹಳ್ಳಿ, ಬಿ.ಎಂ ರಾಮಸ್ವಾಮಿ, ಸುಧಾಕರ್, ಕಬ್ಬಳಿ ಸತೀಶ್,ಇತರರು ಇದ್ದರು.