ಬೇಲೂರು : ಗೋಣಿ ಸೋಮನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಠಾಣಾ ಜಾಗಕ್ಕೆ ಸೇರಿದ ಸುಮಾರು 12 ಅಡಿ ಜಾಗದಲ್ಲಿ ರಸ್ತೆ ಬಿಡಿಸಿಕೊಡುವಂತೆ ಬೇಲೂರು ತಾಪಂ ಇಒ ಸ್ಥಳ ಪರಿಶೀಲನೆ ಮಾಡಿ ಮೌಖಿಕವಾಗಿ ಸ್ಥಳದಲ್ಲಿ ಪಿ.ಡಿ.ಒ.ಗೆ ಆದೇಶ ಮಾಡಿದ್ದರೂ, ರಸ್ತೆ ಬಿಡಿಸಿ ಕೊಡುವಲ್ಲಿ ವಿಫಲರಾಗಿರುವ ಪಿ.ಡಿ.ಒ. ರಘುನಾಥ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಮುಂದೆ ಸಂತ್ರಸ್ತರು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಜಯಕುಮಾರ್, ಗೋಣಿ ಸೋಮನಹಳ್ಳಿ ಗ್ರಾಮದ ನನ್ನ ಮನೆಯ ಪಕ್ಕದಲ್ಲಿ 12 ಅಡಿ ಖಾಲಿ ನಿವೇಶನವಿದೆ. ಈ ಜಾಗದಲ್ಲಿ ಅನಾದಿಕಾಲದಿಂದಲೂ ತಿರುಗಾಡಿಕೊಂಡು ಬಂದಿದ್ದೇವೆ. ಈಗಿರುವಾಗ ನಮ್ಮ ಗ್ರಾಮದವರೇ ಆದ ಮೊಗಣ್ಣೇಗೌಡ ಇತರರು, ಈ ಜಾಗದಲ್ಲಿ ನಮ್ಮ ಕುಟುಂಬ ತಿರುಗಾಡದಂತೆ ಅಡ್ಡಗಟ್ಟಿ ಉದ್ದೇಶ ಪೂರ್ವಕವಾಗಿ ದನಗಳನ್ನು ಕಟ್ಟುವುದು, ಕಲ್ಲು ಚಪ್ಪಡಿ ಮುಳ್ಳು ಹಾಕುತ್ತಾರೆ ಎಂದು ದೂರಿದರು. ಜೆ.ಜೆ.ಎಂ ನಲ್ಲಿ ಹಾಕಿಸಿಕೊಳ್ಳಲು ಬಿಡುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಅನೇಕ ಬಾರಿ ಪಿ.ಡಿ.ಒ ರಘುನಾಥ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಇಒ ಗಮನಕ್ಕೆ ತಂದೆನು. ಅವರು ಸ್ಥಳ ಪರಿಶೀಲನೆ ಮಾಡಿ ತಕ್ಷಣ ಅಂದಾಜು 10 ಅಡಿ ರಸ್ತೆಗೆ ಜಾಗ ಗುರುತು ಮಾಡಿ ಪಿ.ಡಿ.ಒಗೆ ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.ಇದರಿಂದ ಅನೇಕ ರೀತಿಯ ತೊಂದರೆ ಆಗುತ್ತಿದೆ. ಇನ್ನಾದರೂ ರಸ್ತೆ ಗುರುತು ಮಾಡಿಕೊಡಬೇಕು, ಕರ್ತವ್ಯ ಲೋಪ ಎಸಗಿರುವ ಪಿ.ಡಿ.ಒ ರಘುನಾಥ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಮನವಿ ಮಾಡಿದರು. ದಾರಿಗೆ ಅಡ್ಡಹಾಕಿರುವ ಕಲ್ಲು ಗುಂಡಿಗಳನ್ನು ತೆಗೆಸಬೇಕು, ಮೊಗಣ್ಣಗೌಡ ಮತ್ತು ಇತರರು ನಮ್ಮ ಕುಟುಂಬಕ್ಕೆ ತೊಂದರೆ ನೀಡದಂತೆ ಪೊಲೀಸ್ ಮೂಲಕ ರಕ್ಷಣೆ ಕೊಡಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ವಿಜಯಕುಮಾರ್, ಹುಲಿಯಪ್ಪ, ಯೋಗೀಶ್, ಕಮಲ, ಕವಿತ ಇದ್ದರು.
Tags
ಬೇಲೂರು