೧೯ಕ್ಕೆ ರೈತರ ಸಂಕಷ್ಟಗಳ ಆಧಾರಿತ ಶೈಲಜಾ ಹಾಸನ ಅವರ ಇಳಾ ಕಾದಂಬರಿ ಆಧಾರಿತ ನಾಟಕ ಪ್ರದರ್ಶನ

ಹಾಸನ: ನಗರದ ಮುಕ್ತ ಫೌಂಡೇಶನ್ ವತಿಯಿಂದ ನ.೧೯ ರಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರೈತರ ಸಂಕಷ್ಟಗಳ ಆಧಾರಿತ ಶೈಲಜಾ ಹಾಸನ ಅವರ ಇಳಾ ಕಾದಂಬರಿ ಆಧಾರಿತ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷೆ ವೇದಶ್ರಿ ರಾಜ್ ತಿಳಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ನಮ್ಮೂರಿನ ಹಿರಿಯ ಸಾಹಿತಿ ಶೈಲಜಾ ಹಾಸನ್ ಅವರು ಬರೆದಿರುವ ಇಳಾ ಕಾದಂಬರಿ ಆಧಾರಿತ ನಾಟಕ ಇದಾಗಿದ್ದು, ರಂಗ ನಿರ್ದೇಶಕ ಜಯಶಂಕರ್ ಬೆಳಗುಂಬ ಅವರು ಕಾದಂಬರಿಯನ್ನು ನಾಟಕ ರೂಪಕ್ಕೆ ತಂದು ನಿರ್ದೇಶನ ಮಾಡಿದ್ದಾರೆ ಎಂದರು.

ಲೇಖಕಿ ಶೈಲಜಾ ಹಾಸನ ಅವರು ಮಾತನಾಡಿ, ಇಳಾ ನನ್ನ ಕನಸು, ಪ್ರತಿಯೊಬ್ಬ ಹೆಣ್ಣು ಮಗಳು ಇಳಾಳಂತೆ ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗಿ ಬದುಕಬೇಕು ಅನ್ನೋದು ನನ್ನ ಆಶಯ. ತಂದೆ ಸೋತ ಜಾಗದಲ್ಲೇ ತಾನು ಗೆದ್ದು ಇತರರಿಗೆ ಮಾದರಿಯಾಗುವ ಹೆಣ್ಣು ಮಕ್ಕಳ ಪಾತ್ರ ಸೃಷ್ಟಿಸಲಾಗಿದೆ. ಇದೀಗ ನನ್ನ ಕನಸಿನ ಪಾತ್ರಗಳು ರಂಗದ ಮೇಲೆ ಕಾಣಿಸಿಕೊಳ್ಳುತ್ತಿರುವುದು ನನಗೆ ಸಂತೋಷ ನೀಡಿದೆ ಎಂದರು.

ನಿರ್ದೇಶಕ ಜಯಶಂಕರ್ ಬೆಳಗುಂಬ ಮಾತನಾಡಿ, ಸುಮಾರು ೪ ಗಂಟೆ ಇರುವ ಕಥೆಯನ್ನು ೨ ಗಂಟೆಗೆ ಇಳಿಸಿ ನಾಟಕ ರೂಪಕ್ಕೆ ತರಲಾಗಿದೆ ಎಂದರು.

ಇಡೀ ನಾಟಕದ ಎಲ್ಲಾ ಪಾತ್ರಧಾರಿಗಳು ಮಹಿಳೆಯರೇ ಆಗಿದ್ದು, ತಮಗೆ ವಹಿಸಿದ ಪಾತ್ರಗಳನ್ನು ನುರಿತ ಕಲಾವಿದರ ರೀತಿಯಲ್ಲೇ ಅಭಿನಯಿಸಿದ್ದಾರೆ ಎಂದರು. ಎಲ್ಲಾ ವಯಸ್ಸಾದ ಜೀವಗಳಿಗೆ ಗೌರವ ಕೊಡಬೇಕು ಎಂಬ ಅಂಶವನ್ನೂ ಇಲ್ಲಿ ಒತ್ತಿ ಹೇಳಲಾಗಿದೆ ಎಂದರು. ನಾಟಕದ ಎಲ್ಲಾ ಹಾಡುಗಳು ಉತ್ತಮವಾಗಿವೆ ಎಂದರು.

ಒಟ್ಟಾರೆ ಸುಮಾರು ೩೫ ಜನ ಕಲಾವಿದರು, ಸಹ ನಟರು ಇರುವ ನಾಟಕ ಇದಾಗಿದ್ದು, ರೈತರ ಕಷ್ಟ ಹಾಗೂ ರೈತರ ಸಂಕಟಗಳನ್ನು ಒಳಗೊಂಡು ನಾಟಕ ರಚಿತವಾಗಿದೆ. ನಾಟಕ ವೀಕ್ಷಣೆಗೆ ಎಲ್ಲರಿಗೂ ಉಚಿತ ಪ್ರವೇಶ ಇದೆ ಎಂದು ಹೇಳಿದರು.

ನಗರದ ಪ್ರತಿಯೊಬ್ಬರೂ ಆಗಮಿಸಿ ನಾಟಕ ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಸುಧಾ ರವಿಕುಮಾರ್, ಮಂಜುಳಾ ಉಮೇಶ್, ಮಧುಕುಮಾರಿ ಇದ್ದರು.

Post a Comment

Previous Post Next Post