ನವದೆಹಲಿ: ಇಂದು ದೆಹಲಿಯಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ, ಹಾಸನದ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ನಡೆಸಿ, ಮಾನ್ಯ ಸಚಿವರಿಗೆ ಮನವಿ ಪತ್ರವನ್ನು ಹಾಸನದ ಸಂಸಾದ ಶ್ರೇಯಸ್ ಪಟೇಲ್ ಸಲ್ಲಿಸಿದರು.
ಬೇಲೂರು ಮತ್ತು ಹಳೇಬೀಡು ದೇವಾಲಯಗಳ ಪ್ರದೇಶ ಸಂರಕ್ಷಿತ ಸ್ಮಾರಕವಾಗಿದ್ದು, ಅಲ್ಲಿನ ನಿವಾಸಿಗಳಿಗೆ ಮನೆಗಳ ಅಭಿವೃದ್ಧಿ ನಡೆಸಲು ಅನುಮತಿ ಸಿಗುತ್ತಿಲ್ಲ. ಇದರಿಂದ ಅವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದನ್ನು ಸಚಿವರ ಗಮನಕ್ಕೆ ತಂದು, ಈ ಸಮಸ್ಯೆಯನ್ನು ನಿವಾರಿಸುವಂತೆ ಮನವಿ ಮಾಡಿದರು.
ಕರ್ನಾಟಕದ ಪಾರಂಪರಿಕ ಪ್ರವಾಸೋದ್ಯಮ ತಾಣಗಳಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳಗಳು ಅತ್ಯಂತ ಜನಪ್ರಿಯವಾಗಿವೆ. ಇವುಗಳು ಐತಿಹಾಸಿಕವೂ, ಕರ್ನಾಟಕದ ಶಿಲ್ಪಕಲೆಯ ವೈಭವವನ್ನು ಸಾರುವ ತಾಣಗಳಾಗಿರುವುದರಿಂದ, ಕೇಂದ್ರ ಸರ್ಕಾರದ ಸ್ವದೇಶ ದರ್ಶನ ಯೋಜನೆಯಡಿ ಇವುಗಳನ್ನು ಒಳಗೊಂಡು, ಸಮಗ್ರ ಪ್ರವಾಸೋದ್ಯಮ ಸರ್ಕ್ಯುಟ್ ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸಿದರು.
ಹಾಸನ ಜಿಲ್ಲೆಯ ಅತ್ಯಂತ ಸುಂದರವಾದ, 2,000 ಎಕರೆಗೂ ಹೆಚ್ಚಿನ ಜಾಗದಲ್ಲಿ ಹರಡಿರುವ ಐತಿಹಾಸಿಕ ಮದಗದ ಕೆರೆಯನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿ ಈ ಎಲ್ಲಾ ಮನವಿಗಳನ್ನು ಮಾನ್ಯ ಕೇಂದ್ರ ಪ್ರವಾಸೋದ್ಯಮ ಸಚಿವರು ಸ್ವೀಕರಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದರೆ. ಈ ಅಭಿವೃದ್ಧಿ ಕಾರ್ಯಗಳಿಂದ ಹಾಸನದ ಪ್ರವಾಸೋದ್ಯಮ ಕ್ಷೇತ್ರ ಹೊಸ ಮಜಲು ತಲುಪಲಿದೆ ಎಂದು ಹಾಸನದ ಸಂಸಾದ ಶ್ರೇಯಸ್ ಪಟೇಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.