ಹಾಸನ: ಅಜ್ಞಾನ ಮೌಢ್ಯದ ಪ್ರತಿರೂಪವೇ ಬಾಲ್ಯ ವಿವಾಹ. ಇದನ್ನ ತಡೆಗಟ್ಟುವಲ್ಲಿ ಇಲಾಖೆ ಅಧಿಕಾರಿಗಳ ಜೊತೆ ಸಮಾಜದಲ್ಲಿ ಸಾರ್ವಜನಿಕರ ಜವಾಬ್ದಾರಿ ಕೂಡ ಇದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ವಸತಿ ಶಾಲೆ ಕಾಲೇಜುಗಳ ಪ್ರಾಂಶುಪಾಲರ ಹಾಗೂ ನಿಲಯ ಪಾಲಕರಿಗೆ ಬಾಲ್ಯ ವಿವಾಹ ತಡೆ ಕಾಯಿದೆ, ಬಾಲ ನ್ಯಾಯ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ಸಂರಕ್ಷಣೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮೊರಾರ್ಜಿ ಶಾಲೆಯ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಾವು ಎಲ್ಲಿ ಇದ್ದೇವೆ, ಏನು ಕೆಲಸ ಮಾಡುತ್ತಿದ್ದೇವೆ, ನಿಮ್ಮ ಜವಾಬ್ದಾರಿ ಅರಿವು ತಿಳುವಳಿಕೆ ಇರಬಹುದು. ಹೆಚ್ಚಿನ ಮಾಹಿತಿ ಕುರಿತು ತಿಳಿಯುವುದು ಅವಶ್ಯಕ. ಅದರಲ್ಲೂ ಬಾಲ್ಯ ವಿವಾಹ ತಡೆ ಕಾಯಿದೆ ಬಗ್ಗೆ ಅಧಿಕಾರಿಗಳನ್ನು ಈಗಾಗಲೇ ಗುರುತಿಸಲಾಗಿದೆ.ಬಾಲ್ಯ ವಿವಾಹಗಳು ಎಲ್ಲೆಲ್ಲಿ ನಡೆಯುತ್ತಿವೆ ಎಂಬ ಬಗ್ಗೆ ಗಮನಹರಿಸಬೇಕು. ಈ ಬಾಲ್ಯ ವಿವಾಹ ಮಾಡಲು ಅನೇಕ ಕಾರಣ ಇರಬಹುದು, ಅದರಲ್ಲೂ ಆರ್ಥಿಕ ಸಮಸ್ಯೆ, ಅಪ್ಪ, ತಾತ, ಅಜ್ಜಿ ಹಾಸಿಗೆ ಹಿಡಿದಿರಬಹುದು, ಇವರು ಮೊಮ್ಮಕ್ಕಳ ಮದುವೆ ನೋಡಬೇಕು ಎನ್ನುವ ಕೊನೆ ಆಸೆ ಇರಬಹುದು.
ಈ ತರ ಅಜ್ಞಾನ ಮೌಢ್ಯದ ಪ್ರತಿರೂಪವೇ ಬಾಲ್ಯ ವಿವಾಹ ಎಂದರೆ ತಪ್ಪಾಗಲಾರದು ಎಂದರು. ಈ ಬಗ್ಗೆ ಹೆಚ್ಚನ ವಿಷಯ ತಿಳಿಸಲು ನ್ಯಾಯಾಧೀಶರು, ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿದ್ದಾರೆ, ಪ್ರಸ್ತುತದಲ್ಲಿ ಇನ್ನೂ ಕೂಡ ಮೌಢ್ಯ ಆಚರಣೆ ಇದ್ದು, ಸಾಮಾಜಿಕವಾಗಿ ಕೆಳ ಮಟ್ಟದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ನಮ್ಮ ಗಮನಕ್ಕೆ ಬರುವ ಮೊದಲೇ ಮದುವೆ ನಡೆದೇ ಹೋಗಿರುತ್ತವೆ. ಇದಕ್ಕೆ ಯಾವ ಶಿಕ್ಷಗಳಿವೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ನಮ್ಮದೂ ಸಾಮಾಜಿಕ ಜವಾಬ್ದಾರಿ ಇದೆ. ಅವರು ಅಧಿಕಾರಿಗಳ ಜೊತೆ ಸಮಾಜದಲ್ಲಿ ಸಾರ್ವಜನಿಕರ ಜವಾಬ್ದಾರಿ ಕೂಡ ಇದರಲ್ಲಿದೆ. ಸಾಮಾಜಿಕ ಮೌಢ್ಯ ಆಚರಣೆಗೆ ನಾವು ಬಿಡಬಾರದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ದಾಕ್ಷಾಯಿಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಟಿ.ಮಲ್ಲೇಶ್, ಸಿಐಡಿ ಕಚೇರಿ ಅಧಿಕಾರಿ ರೋಹಿತ್, ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್, ಇಲಾಖೆ ಉಪನಿರ್ದೇಶಕ ರವಿಕುಮಾರ್ ಇತರರಿದ್ದರು.