ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಡಿ.೧೪ ರಂದು ಮಧ್ಯಾಹ್ನ ೧೨ ಗಂಟೆಗೆ ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘ ಉದ್ಘಾಟನೆಯಾಗಲಿದೆ, ಅದರ ಅಂಗವಾಗಿ ಪ್ರಚಂಡ ರಾವಣ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಜಗದೀಶ್ ರಾಮಘಟ್ಟ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ರಂಗ ನಿರ್ದೇಶಕ, ಕೀರ್ತನಾಕಾರ ದಿ.ಡಾ. ರಂಗಪ್ಪದಾಸ್ ಅವರ ೨ನೇ ವರ್ಷದ ನೆನಪು ಕಾರ್ಯಕ್ರಮ. ಕರ್ನಾಟಕದಲ್ಲಿ ನಟ ಭಯಂಕರ ಎಂಬ ಬಿರುದು ಪಡೆದಿದ್ದ ದಿ.ವಜ್ರಮುನಿ ಅಭಿನಯಿಸಿರುವ, ದಿ.ಕಣಗಾಲ್ ಪ್ರಭಾಕರ್ ಶಾಸ್ತ್ರಿ ರಚಿತ ಪ್ರಚಂಡ ರಾವಣ ನಾಟಕ ಕರ್ನಾಟಕ ರಾಜ್ಯಾದಂತ ೨೫ನೇ ಪ್ರದರ್ಶನದತ್ತ ಸಾಗುತ್ತಿದೆ. ಕಲಾಭಿಮಾನಿಗಳ ಪ್ರೋತ್ಸಾಹದೊಂದಿಗೆ ವೀರ ಭದ್ರ್ರಾಚಾರ್ ಗಾಡೇನಹಳ್ಳಿ ಅವರ ನಿರ್ದೇಶನದಲ್ಲಿ ಪ್ರಚಂಡ ರಾವಣ, ಸಿನಿಮಾ ಮಾದರಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂದರು.೯ ಗಂಟೆಗಳ ಈ ನಾಟಕವನ್ನು ೩ ಗಂಟೆ ಅವಧಿಯಲ್ಲಿ ನಮ್ಮ ಸಂಘದ ಕಲಾವಿದರು ಅಭಿನಯಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್ ವಹಿಸುವರು. ಸಂಸದ ಶ್ರೇಯಸ್ ಪಟೇಲ್ ಉದ್ಘಾಟನೆ ನೆರವೇರಿಸುವರು. ಮಾಜಿ ಶಾಸಕ ಪ್ರೀತಂ ಜೆ. ಗೌಡ, ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಭಾಗವಹಿಸುವರು ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ರಾಮಲಿಂಗೇಗೌಡ ಕದಾಳು, ಕಾರ್ಯದರ್ಶಿ ನಿರಂಜನ್ ಹಂಚೂರು, ಗೌರವಾಧ್ಯಕ್ಷ ಗೋವಿಂದೇಗೌಡ, ನಿರ್ದೇಶಕಿ ರಾಣಿ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಇದ್ದರು.