ಹಾಸನ: ಶ್ರೀಗಂಧ ಬೆಳೆಯುವ ಕೃಷಿಕರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಡಿ. ಕುಮಾರ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಚಂದ್ರಪ್ಪ ಶ್ರೀಗಂಧ ಬೆಳೆಗಾರರಾಗಿದ್ದು, 15 ವರ್ಷಗಳಿಂದ ತಮ್ಮ ಜಮೀನಿನಲ್ಲಿ ವನ ಕೃಷಿ ಮಾಡುತ್ತಿದ್ದಾರೆ. ಶ್ರೀಗಂಧ ಮರಗಳು ಕಟಾವಿಗೆ ಬಂದಿದ್ದು, ಇವನ್ನು ಮಾರಾಟ ಮಾಡಲು ಅರಣ್ಯ ಇಲಾಖೆಯ ಒಪ್ಪಿಗೆ ಬೇಕಾಗಿದೆ. ಅದಕ್ಕಾಗಿ ಜನವರಿ 7 ರಿಂದಲೂ 4–5 ಬಾರಿ ಪತ್ರ ವ್ಯವಹಾರ ಮಾಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಉತ್ತರ ನೀಡಿಲ್ಲ’ ಎಂದು ದೂರಿದರು.
‘ನಂತರ ಶ್ರೀಗಂಧ ಕಳ್ಳತನ ಮಾಡಿರುವುದಾಗಿ ಚಂದ್ರಪ್ಪ ವಿರುದ್ಧ ಪ್ರಕರಣ ದಾಖಲಿಸಿ, ಹಿಂಸೆ ನೀಡಿದ್ದಾರೆ. ಅಕ್ಟೋಬರ್ 23ರಂದು ಚಂದ್ರಪ್ಪ ಅವರನ್ನು ಅರಣ್ಯ ಇಲಾಖೆ ಕಚೇರಿಗೆ ಕರೆಯಿಸಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ನಂತರ ₹ 2 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದು, ಲಂಚ ನೀಡದ ಹಿನ್ನೆಲೆಯಲ್ಲಿ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿದರು.
‘ಈಗಾಗಲೇ ನೂರಾರು ಕೆ.ಜಿ. ಶ್ರೀಗಂಧ ಅರಣ್ಯ ಇಲಾಖೆ ವಶದಲ್ಲಿದ್ದು, ಸೂಕ್ತ ನ್ಯಾಯ ಒದಗಿಸಬೇಕು. ರೈತರು ಸ್ವಂತ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಮಾರಾಟಕ್ಕೆ ಅವಕಾಶ ನೀಡಬೇಕು’ ಎಂದು ಕುಮಾರ್ ಒತ್ತಾಯಿಸಿದರು.
‘ನಿವೃತ್ತ ಶಿಕ್ಷಕರಾಗಿರುವ ಚಂದ್ರಪ್ಪ ಅವರ ಮೇಲಿನ ದೌರ್ಜನ್ಯದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು. ಚಂದ್ರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯಬೇಕು. ಅರಣ್ಯ ಇಲಾಖೆ ಅಡಿ ಬರುವ ಶ್ರೀಗಂಧ ಕೃಷಿಯನ್ನು ತೋಟಗಾರಿಕಾ ಇಲಾಖೆಗೆ ವರ್ಗಾಯಿಸಬೇಕು. ಇಂತಹ ಘಟನೆಗಳು ಮರುಕಳಿಸಿದಂತೆ ಅರಣ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ನಿವೃತ್ತ ಶಿಕ್ಷಕ, ಶ್ರೀಗಂಧ ಬೆಳೆಗಾರ ಚಂದ್ರಪ್ಪ ಇದ್ದರು.