ಹಾಸನ: ನಗರದ ಪ್ರಮುಖ ಮೇಲ್ಸೇತುವೆ ಮತ್ತೊಂದು ಬದಿಯ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಅರ್ಧಕ್ಕೆ ನಿಂತಿರುವ ಕಾಮಗಾರಿಯಲ್ಲಿ ಅಳವಡಿಸಿರುವ ಸಾಮಗ್ರಿಗಳು ತುಕ್ಕು ಹಿಡಿಯುತ್ತಿದ್ದು, ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ಹೆಚ್ಚು ವಾಹನ ದಟ್ಟಣೆ ಇರುವ ಚನ್ನಪಟ್ಟಣ–ಎನ್.ಆರ್. ವೃತ್ತದ ಮಧ್ಯೆ ಮೇಲ್ಸೇತುವೆ ನಿರ್ಮಿಸುತ್ತಿದ್ದು, ಒಂದು ಬದಿ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳುಗಳೇ ಕಳೆದಿವೆ. ಆದರೆ, ಮತ್ತೊಂದು ಬದಿಯ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದ್ದು, ಇದರಿಂದ ಸುಗಮ ಸಂಚಾರಕ್ಕೆ ತೊಡಕಾಗಿದೆ.
ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸೇತುವೆಯ ಮೇಲ್ಭಾಗದಲ್ಲಿ ತಡೆಗೋಡೆಗೆ ಹಾಕಿರುವ ಕಬ್ಬಿಣ ಸಲಾಕೆಗಳು ತುಕ್ಕು ಹಿಡಿಯುತ್ತಿವೆ. ಮೇಲ್ಸೇತುವೆ ಒಂದು ಬದಿಯಿಂದ ಮತ್ತೊಂದು ಬದಿವರೆಗೂ ಡಿವೈಡರ್‌ಗೆ ಅಳವಡಿಸಿರುವ ಕಬ್ಬಿಣದ ಕಂಬಿಗಳೂ ತುಕ್ಕು ಹಿಡಿದು ಹಾಳಾಗುತ್ತಿವೆ.
ಬೇಕಾಬಿಟ್ಟಿ ಕ್ಯೂರಿಂಗ್ ಮಾಡಿ ಸೇತುವೆಯ ಎರಡೂ ಬದಿಗೆ ಜೋಡಣೆ ಮಾಡಲು ರಸ್ತೆಯ ಪಕ್ಕದಲ್ಲೇ ಇರಿಸಿರುವ ಬೃಹತ್ ಗಾತ್ರದ ಸಿಮೆಂಟ್ ಕಂಬಗಳು ಸಹ ಶಿಥಿಲಾವಸ್ಥೆ ತಲುಪಿದ್ದು, ಇದನ್ನೇ ಅಳವಡಿಸಿದರೆ ಸೇತುವೆ ಎಷ್ಟರಮಟ್ಟಿಗೆ ಸುರಕ್ಷಿತವಾಗಿ ನಿರ್ಮಾಣವಾಗಲಿದೆ ಎಂಬ ಆತಂಕವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.
ಸೂಕ್ತ ಕಬ್ಬಿಣ ಹಾಗೂ ಸಿಮೆಂಟ್ ಕ್ಯೂರಿಂಗ್ ಮಾಡದೇ ಇರುವುದರಿಂದ ಈ ಹಿಂದೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಕುಸಿದು ಬಿದ್ದಿತ್ತು. ಇದರಿಂದ ಕಾಮಗಾರಿ ಹಲವು ತಿಂಗಳು ವಿಳಂಬವಾಯಿತು. ಇದೀಗ ಕಾಮಗಾರಿ ಪ್ರಾರಂಭವಾದರೆ, ತುಕ್ಕು ಹಿಡಿದ ಕಬ್ಬಿಣದ ಸರಳಿಗೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದರೆ ಎಷ್ಟರ ಮಟ್ಟಿಗೆ ಗಟ್ಟಿಯಾಗಲಿದೆ ಎನ್ನುತ್ತಿದ್ದಾರೆ ವಾಹನ ಸವಾರರು.
ಕಾಮಗಾರಿ ವಿಳಂಬವಾದಷ್ಟು ಸೇತುವೆ ಹಾಗೂ ಇದಕ್ಕೆ ಬಳಸಿರುವ ಕಬ್ಬಿಣದ ಗುಣಮಟ್ಟ ಕಡಿಮೆಯಾಗಲಿದ್ದು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸೇತುವೆ ಮೇಲೆ ಆತಂಕದಿಂದಲೇ ಸಂಚರಿಸಬೇಕಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ.
ಅನುದಾನ ಬಿಡುಗಡೆ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದು ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲೂ ಚರ್ಚೆ ನಡೆಸಿ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು.