ಹಳೇಬೀಡು: ಜೈನರಗುತ್ತಿಯಲ್ಲಿ ಪಂಚಕಲ್ಯಾಣಿಕ ಮಹಾ ಮಹೋತ್ಸವವು ಬುಧವಾರ ಮೋಕ್ಷ ಕಲ್ಯಾಣಿಕದೊಂದಿಗೆ ವೈಭವದ ತೆರೆ ಕಂಡಿತು. ಸಾವಿರಾರು ಭಕ್ತರು ಈ ಸನ್ನಿವೇಶಕ್ಕೆ ಸಾಕ್ಷಿಯಾದರು.
ಜೈನರಗುತ್ತಿ ಕ್ಷೇತ್ರದಲ್ಲಿ ವಿರಾಜಮಾನರಾಗಿರುವ ಜೈನ ತೀರ್ಥಂಕರರಾದ ಮುನಿಸುವ್ರತ ಹಾಗೂ ಶೀತಲನಾಥ ತೀರ್ಥಂಕರರ ಬೃಹತ್ ಮೂರ್ತಿಗಳಿಗೆ ಪಂಚಕಲ್ಯಾಣಿಕ ಪೂರ್ವಕ ಮೊದಲ ಮಸ್ತಕಾಭಿಷೇಕ ನಡೆಯಿತು. ಎಳನೀರು, ಹಾಲು, ಕಬ್ಬಿನಹಾಲು, ಚತುಷ್ಕೋನ ಕಳಸ, ಶ್ರೀಗಂಧ, ಅರಿಸಿನ, ಕಲ್ಕಚೂರ್ಣ, ಚಂದನ, ಕಷಾಯಗಳನ್ನು 1008 ಕಳಸಗಳಲ್ಲಿ ತುಂಬಿ ಅಭಿಷೇಕ ಮಾಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ‘ಬೇಲೂರು ತಾಲ್ಲೂಕಿನ ಪುರಾತನ ವಿಗ್ರಹಗಳು ಪತ್ತೆಯಾಗುತ್ತಿದ್ದು, ಸಂಶೋಧನೆಗೆ ಅನುಕೂಲವಾಗುವಂತೆ ಧರ್ಮಸ್ಥಳ ಧರ್ಮೋತ್ಥಾನ ಸಂಸ್ಥೆಯಿಂದ ಶೀಘ್ರವೇ ಇಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು’ ಎಂದರು.
‘ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿದ್ದು, ಅಗತ್ಯ ವ್ಯವಸ್ಥೆಗಳನ್ನು ಒದಗಿಸಿಕೊಡುತ್ತೇವೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಮಣ್ಣಿನಡಿಯಲ್ಲಿ ಹಲವಾರು ವಿಗ್ರಹಗಳು ಸಿಕ್ಕಿದ್ದು, ಅವುಗಳಿಗೆ ದೇಗುಲ ನಿರ್ಮಿಸಲು ಧರ್ಮಸ್ಥಳ ಸಂಸ್ಥೆ ಸಹಕಾರ ನೀಡಿದೆ’ ಎಂದರು.
ಆಚಾರ್ಯ ಶ್ರೀಗಳಾದ ವಿಶುದ್ಧ ಸಾಗರ ಮುನಿ ಮಹಾರಾಜ್, ಚಂದ್ರಪ್ರಭ ಮುನಿ ಮಹಾರಾಜ್, ಜೈನಮುನಿ ವೀರಸಾಗರ ಮುನಿ ಮಹಾರಾಜ್, ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.