ಬೆಳಗಾವಿ: ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿದ್ದು, ಬಗೆ ಹರಿಸುವಂತೆ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್ ಸದನದ ಗಮನ ಸೆಳೆದರು.
ಗುರುವಾರದ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಸಂಬಂಧ ತಡರಾತ್ರಿ ಚರ್ಚೆ ನಡೆಯಿತು. ಬೇಲೂರು ಕ್ಷೇತ್ರ ಈಗಾಗಲೇ ಅನೇಕ ಜ್ವಲಂತ ಸಮಸ್ಯೆ ಗಳಿಂದ ಬಳಲುತ್ತಿದೆ. ನನ್ನ ಕ್ಷೇತ್ರದ ಜನತೆ ಅಭಿವೃದ್ಧಿ ಜೊತೆಗೆ ಎಲ್ಲ ವಿಚಾರಗಳಲ್ಲಿಯೂ ಪರಿತಪಿಸುತ್ತಿದ್ದಾರೆ.
ಕ್ಷೇತ್ರದ ಅರೇಹಳ್ಳಿ, ಬಿಕ್ಕೋಡು ಹೋಬಳಿಯ ಮಲೆನಾಡು ಭಾಗಗಳಲ್ಲಿ ಅನೇಕ ವರ್ಷಗಳಿಂದ ಕಾಡುತ್ತಿರುವ ಅತಿ ಮುಖ್ಯ ಜ್ವಲಂತ ಸಮಸ್ಯೆ ಕಾಡಾನೆ ಸಮಸ್ಯೆಯಾಗಿದೆ. ನಾನು ಶಾಸಕನಾದ ನಂತರ ಎಲ್ಲ ಅಧಿವೇಶನದಲ್ಲಿಯೂ ಈಗಾಗಲೇ ಅನೇಕ ಬಾರಿ ಚರ್ಚೆ ಮಾಡಿದ್ದು, ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದ್ದೇನೆ.
ಸಮಸ್ಯೆಗೆ ಮುಕ್ತಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅರಣ್ಯ ಸಚಿವ ಈಶ್ವರ್‌ಖಂಡ್ರೆ ಅವರನ್ನು ಅನೇಕ ಬಾರಿ ಭೇಟಿ ಮಾಡಿ, ಕ್ಷೇತ್ರದ ಮಲೆನಾಡು ಜನರನ್ನು ಕಾಡುತ್ತಿರುವ ಕಾಡಾನೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಕೋರಲಾಗಿದೆ. ಕಾಡಾನೆ ದಾಳಿಯಿಂದ ಈಗಾಗಲೇ ಅನೇಕ ಪ್ರಾಣ ಹಾನಿಯಾಗಿದೆ, ಅನೇಕರು ಶಾಶ್ವತ ಅಂಗವೈಕಲ್ಯತೆ ಹೊಂದಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ ನಮ್ಮ ಭಾಗಕ್ಕೆ ೫೩ ಕಾಡಾನೆಗಳು ಹಿಂಡು ಹಿಂಡಾಗಿ ಬಂದಿದ್ದು, ಜನರ ಬಲವೇ ಕುಸಿದು ಹೋಗಿದೆ ಎಂದರು.
ಬಿಕ್ಕೋಡು, ಅರೇಹಳ್ಳಿ ಹೋಬಳಿಗಳ ಜಗಬೋರನಹಳ್ಳಿ, ಬಿಳಗುಲಿ, ಮದಘಟ್ಟ, ಕೊತ್ತನಳ್ಳಿ, ಮಾಳೇಗೆರೆ, ನಿಡುಮನಹಳ್ಳಿ, ಬಾರೇಮನೆ, ಹೊನ್ನೆಮನೆ, ಹಿರೇಹಸಡೆ, ಇಂಟಿತೊಳಲು, ಕೋಗೋಡು, ನಾಗೇನಹಳ್ಳಿ, ಚೀಕನಹಳ್ಳಿ, ತಗರೆ, ಕೋಗಿಲಮನೆ, ಕುಶಾವರ, ಮೊಗಸಾವರ ಹೀಗೆ ಪ್ರತಿದಿನ ಒಂದೊಂದು ಗ್ರಾಮಗಳಿಗೆ ದಾಳಿ ಇಡುತ್ತಿರುವ ಕಾಡಾನೆಗಳಿಂದ ಫಸಲಿಗೆ ಬಂದಂತಹ ಭತ್ತದ ಗದ್ದೆಗಳು, ಅಡಕೆ ತೋಟಗಳು, ಮುಸುಕಿನ ಜೋಳದ ಹೊಲಗಳು, ಬಾಳೆತೋಟ, ತೆಂಗಿನ ತೋಟಗಳು, ಕಾಫೀ, ಮೆಣಸು ತೋಟಗಳನ್ನು ಸರ್ವನಾಶವಾಗಿದ್ದು, ರೈತರ ಬದುಕು ಮೂರಾ ಬಟ್ಟೆಯಾಗಿದೆ ಎಂದು ಸದನಕ್ಕೆ ಗಮನಕ್ಕೆ ತಂದರು.
ಕಾಡಾನೆಗಳಿಂದ ಹಾನಿಯಾದ ಕಾಫಿ ಮತ್ತು ಇತರೆ ಬೆಳೆಗಳಿಗೆ ೧ ತಿಂಗಳೊಳಗೆ ಪರಿಹಾರ ನೀಡಬೇಕು. ಕಾಡಾನೆ ದಾಳಿಯಿಂದ ಮೃತ ಪಟ್ಟ ಕುಟುಂಬದವರಿಗೆ ನೀಡುವ ಪರಿಹಾರ ಧನವನ್ನು ೧೫ ಲಕ್ಷದಿಂದ ೨೫ ಲಕ್ಷಕ್ಕೆ ಹೆಚ್ಚಿಸಬೇಕು. ಕಾಡಾನೆ ದಾಳಿಯಿಂದ ಅಂಗವೈಕಲ್ಯತೆಗೆ ಒಳಗಾದವರಿಗೆ ಪ್ರತಿ ತಿಂಗಳು ೧೦ ಸಾವಿರ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಾಡಾನೆಗಳು ಕಾಡಿನಿಂದ ನಾಡಿಗೆ ಬಂದಿರುವ ವಿಷಯ ಹಾಗೂ ಕಾಡಾನೆಗಳಿಂದ ಪ್ರಾಣ ಹಾನಿ ಮತ್ತು ಅಪಾರ ಬೆಳೆ ಹಾನಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಸನ ಮತ್ತು ಕೊಡಗು ಜಿಲ್ಲೆಯ ೨೦೦೦ ಎಕರೆ ಪ್ರದೇಶದಲ್ಲಿ ಆನೆ ಕಾರಿಡಾರ್ ನಿರ್ಮಿಸಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಯವ್ಯಯದಲ್ಲಿ ೫೦ ಕೋಟಿ ಮೀಸಲಿರಿಸಲು ಸಿಎಂಗೆ ಕೋರಲಾಗಿದೆ. ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಇದ್ದು, ಸಮಗ್ರ ಯೋಜನೆ ತಯಾರಿಸಿ ಶೀಘ್ರ ಸೂಕ್ತಕ್ರಮ ಕೈಗೊಳ್ಳಲಾಗುವುದೆಂದರು.