ಆಲೂರು: ಮಾನವ ಜನ್ಮ ಸಾರ್ಥಕವಾಗಬೇಕಾದರೆ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳಬೇಕು. ಇದಕ್ಕೆ ಉತ್ತಮ ಉದಾಹರಣೆ ಕಂಬಾಳಿಮಠ ಕುಟುಂಬದವರು ಹಾಗೂ ಭಕ್ತ ಸಮೂಹದವರು ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಶ್ಲಾಘಿಸಿದರು.
ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಶಿಖರ ಕಲಶಾರೋಹಣ ಹಾಗೂ ಲೋಕಾರ್ಪಣೆ ಮತ್ತು ಪುರಪ್ರವೇಶದ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಣ ಇದ್ದವರೆಲ್ಲ ಒಳ್ಳೆಯ ಕಾರ್ಯಗಳನ್ನು ಮಾಡಲ್ಲ. ಹಣ ಇದ್ದರೂ ಒಳ್ಳೆಯ ಮನಸ್ಸು ಬೇಕು. ಅಂತಹ ಒಳ್ಳೆಯ ಮನಸ್ಸು ದಡದಲ್ಲಿ ಗ್ರಾಮಸ್ಥರಿಗಿದ್ದು ಆಂಜನೇಯ ಸ್ವಾಮಿಯ ಸುಂದರ ದೇಗುಲ ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಮನೆ ಎಂದರೆ ಮನಸ್ಸಿನ ನೆಮ್ಮದಿ ಎಂದರ್ಥ. ಮನೆ ಯಾವಾಗಲೂ ಸಂಸ್ಕಾರವಂತಾಗಿದ್ದರೆ ನೆಮ್ಮದಿ, ಶಾಂತಿ ಮತ್ತು ಸಮಾಧಾನ ಸಿಗುತ್ತದೆ. ತಾಯಿ ಮಕ್ಕಳಿಗೆ ಕೊಡುವಂತಹ ಸಂಸ್ಕಾರ ಯಾರಿಂದಲೂ ಕೊಡಲು ಸಾಧ್ಯವಿಲ್ಲ. ತಾಯಿಗಿಂತ ದೊಡ್ಡ ಶಕ್ತಿ, ದೊಡ್ಡ ದೇವರು ಜಗತ್ತಿನಲ್ಲಿ ಕಾಣುವುದಿಲ್ಲ. ದೇವರು ಸೇರಿದಂತೆ ಯಾವುದೆೆ ಋಣ ತೀರಿಸಬಹುದು. ಆದರೆ ತಾಯಿ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಕಾರ್ಜುವಳ್ಳಿ ಹಿರೆಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೂರ್ವಕಾಲದ ಪುಣ್ಯ, ಗುರುಹಿರಿಯ ಆಶೀರ್ವಾದ ಇದ್ದರೆ ಮಾತ್ರ ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವ ಅವಕಾಶ ಲಭಿಸುತ್ತದೆ ದಡಹಳ್ಳಿ ಗ್ರಾಮಸ್ಥರ ಭಕ್ತ ಸಮೂಹ ನೂತನ ಶಿಲಾ ದೇಗುಲ ನಿರ್ಮಿಸಿ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿರುವುದು ಒಳ್ಳೆಯ ಕಾರ್ಯವೆಂದರು. ಹನುಮನು ಹಿಂದೂ ಧರ್ಮಗ್ರಂಥಗಳಲ್ಲಿ ಪೂಜಿಸುವ ದೈವವಾಗಿದ್ದು, ಭಾರತದ ಮಹಾಕಾವ್ಯ ಎಂದೇ ಹೇಳಲಾಗುವ ರಾಮಾಯಣದಲ್ಲಿ ಪ್ರಮುಖ ಪಾತ್ರಗಳಲ್ಲೊಬ್ಬನಾಗಿದ್ದಾನೆ.
ಕೊಡ್ಲಿಪೇಟೆ ಕಲ್ಲು ಮಠಾದ ಪೀಠಾಧ್ಯಕ್ಷ ಶ್ರೀ
ಸ್ವರೂಪಿ ಮಹಾಂತ ಸ್ವಾಮಿಗಳು ಮಾತನಾಡಿ, ವೈಜ್ಞಾನಿಕವಾಗಿ ನಾವು ಎಷ್ಟೆ ಅನುಕೂಲಗಳನ್ನು ಪಡೆದಿದ್ದರೂ ಆಂತರಿಕವಾಗಿ ನೆಮ್ಮದಿಯಾಗಿ ಬದುಕಲು ದೇವಸ್ಥಾನ ಮಠಗಳು ಬೇಕು. ಈ ಭೂಮಿಯಲ್ಲಿ ನಾವುಗಳು ಅತಿಥಿಗಳು. ಕಾಲ ಮುಗಿದ ನಂತರ ಕರೆದಾಗ ಹೋಗಬೇಕು. ನಾವು ಸಂಸ್ಕಾರವಂತರಾದರೆ, ಮುಂದಿನ ಮಕ್ಕಳು ಧಾರ್ಮಿಕವಾಗಿ ಉತ್ತಮ ದಾರಿಯಲ್ಲಿ ಸಾಗುತ್ತಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಎಂ. ಎಸ್. ನಾಗೇಂದ್ರ ಸೇವಾ ಪ್ರತಿಷ್ಠಾನ ಅಧ್ಯಕ್ಷ ಸಿದ್ದೇಶ್ ನಾಗೇಂದ್ರರವರು ಮಾತನಾಡಿ, ದಿನ ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮೊಬೈಲ್ ಬಳಕೆಯಿಂದ ಸಾಮಾಜಿಕ ಜ್ಞಾನ ಕುಸಿಯುತ್ತಿದೆ. ಭಗವಂತ ಮತ್ತು ಭಕ್ತನ ಮದ್ಯೆ ಇರುವ ಏಕೈಕ ಸೂತ್ರ ಭಕ್ತಿ. ಅದನ್ನು ಗುರುವರ್ಯರ ಮುಖಾಂತರ ಕಾಣುತ್ತೇವೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದಗಂಗಾ ಸ್ವಾಮೀಜಿಯವರನ್ನು ಪೂರ್ಣಕುಂಭ ಕಲಶದೊಂದಿಗೆ ಸ್ವಾಗತಿಸಲಾಯಿತು. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿಗಳು, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮಿಗಳು, ದಡದಲ್ಲಿ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್. ನಂಜುಂಡಪ್ಪ. ವೀರಶೈವ ಸಂಘದ ಆಲೂರು ತಾಲೂಕು ಅಧ್ಯಕ್ಷ ಬಿ. ರೇಣುಕಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಕೆ. ಎಸ್. ಮಂಜೇಗೌಡ, ಅಖಿಲ ಭಾರತ ವೀರಶೈವ ಮಹಾಸಭದ ಅಧ್ಯಕ್ಷ ಅಜಿತ್, ಹಿರಿಯ ಮುಖಂಡರಾದ ವಿರೂಪಾಕ್ಷಪ್ಪ, ರುದ್ರಪ್ಪ, ಮಾವನೂರು ಜಗದೀಶ ಶಾಸ್ತ್ರೀಗಳು, ಹಾಸನ ಆಕಾಶವಾಣಿಯ ನಿಸರ್ಗ ಸೇರಿದಂತೆ ಮುಂತಾದವರು ಹಾಜರಿದ್ದರು.
ಫೋಟೋ ಕ್ಯಾಪ್ಶನ್ಸ್ : ಆಲೂರು ಕಸಬಾ ದಡದಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವ್ವಾಮಿ ದೇವಾಲಯದ ಶಿಖರ ಕಲಶಾರೋಹಣ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು ವಿವಿಧ ಮಠಾಧೀಶರು, ಗಣ್ಯರು ಹಾಜರಿದ್ದರು.
ಫೋಟೋ : ದಡದಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಣಕಾರಗೊಂಡ ಆಂಜನೇಯಸ್ವಾಮಿ.
