ಕುರಿಸಾಕಾಣಿಕೆ ಹಾಗೂ ಫುಡ್‌ಕಾರ್ಟ್ ಉದ್ದೇಶಕ್ಕಾಗಿ ಅರ್ಜಿ ಆಹ್ವಾನ

ಹಾಸನ : ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ 2024-25 ನೇ ಸಾಲಿಗೆ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಕುರಿಸಾಕಾಣಿಕೆ ಉದ್ದೇಶಕ್ಕಾಗಿ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ ಫುಡ್‌ಕಾರ್ಟ್ ಉದ್ದೇಶಕ್ಕಾಗಿ ಸಾಲದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. 

ನಿಗಮಗಳ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಹಾಗೂ ಕಳೆದ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು ಉದ್ಯಮಾಶೀಲತಾ ಯೋಜನೆಯಡಿ ಕನಿಷ್ಟ 21 ವರ್ಷದಿಂದ ಗರಿಷ್ಟ 50 ವರ್ಷದೊಳಗಿನ ವಯೋಮಾನದವರಾಗಿರಬೇಕು, ಉದ್ಯಮಶೀಲತಾ ಯೋಜನೆಯಡಿ ಸೌಲಭ್ಯ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿ ವಾರ್ಷಿಕ ಆದಾಯ 1.50 ಲಕ್ಷ ರೂ ಹಾಗೂ ನಗರ ಪ್ರದೇಶದಲ್ಲಿ 2 ಲಕ್ಷ ರೂ ಮೀರಬಾರದು. 

ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆಸರ್ಕಾರ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು, ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು. 

ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಘಟಕ ವೆಚ್ಚ 1 ಲಕ್ಷ ರೂಗಳಾಗಿದ್ದು, 50 ಸಾವಿರ ರೂ. ಸಹಾಯಧನ ಹಾಗೂ 50 ಸಾವಿರ ರೂ ನಿಗಮದ ಸಾಲದ ಮೊತ್ತವಾಗಿರುತ್ತದೆ, ಸ್ವಾವಲಂಬಿ ಸಾರಥಿ ಯೋಜನೆ ಬ್ಯಾಂಕ್ ಶಾಖೆಗಳ ಸಹಯೋಗದೊಂದಿಗೆ ಅನುಷ್ಟಾನಗೊಳ್ಳಲಿದ್ದು, ಬ್ಯಾಂಕ್ ಸಾಲದ ಮೊತ್ತಕ್ಕೆ ಶೇ.75 ರಷ್ಟು ಅಥವಾ ಗರಿಷ್ಟ 4 ಲಕ್ಷ ರೂ ನಿಗಮದ ಸಹಾಯಧನವಾಗಿರುತ್ತದೆ. 

ಸೌಲಭ್ಯ ಪಡೆಯಲು ಇಚ್ಛಿಸುವ ಪರಿಶಿಷ್ಟ ಜಾತಿಯ ಜನರು ಆನ್‌ಲೈನ್ ಮೂಲಕ http://sevasindhu.karnataka.gov.in  ರಲ್ಲಿ ನೇರವಾಗಿ ಅಥವಾ ಕರ್ನಾಟಕ ಒನ್/ಬೆಂಗಳೂರುಒನ್/ ಗ್ರಾಮ ಒನ್ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಸಲ್ಲಿಸಲು ಡಿ.29 ರಂದು ಕೊನೆಯ ದಿನವಾಗಿರುತ್ತದೆ. 

 ಈಗಾಗಲೇ ಅರ್ಜಿ ಸಲ್ಲಿಸಿರುವವರು ಉದ್ದೇಶ ಬದಲಾವಣೆಗೆ ಇಚ್ಛಿಸಿದಲ್ಲಿ ನೇರವಾಗಿ ವೆಬ್‌ಸೈಟ್ http://swdcorp.karnataka.gov.in./ADCL.portal  ನಲ್ಲಿ ಉದ್ದೇಶ ಬದಲಾವಣೆ ಮಾಡಬಹುದಾಗಿರುತ್ತದೆ. ತಪ್ಪಿದಲ್ಲಿ ಸಂಬAಧಿಸಿದ ಜಿಲ್ಲಾ ಕಛೇರಿಗೆ ಮನವಿ ಸಲ್ಲಿಸಬಹುದಾಗಿರುತ್ತದೆ. 

ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಕಚೇರಿ ಮತ್ತು ನಿಗಮದ ವೆಬ್‌ಸೈಟ್ ಅಥವಾ ಕಲ್ಯಾಣಮಿತ್ರ ಸಹಾಯವಾಣಿ 9482300400 ಸಂಪರ್ಕಿಸಬಹುದು ಎಂದು ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Post a Comment

Previous Post Next Post