ಹಾಸನ: ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಎಂದು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ, ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅವರು ಕಳೆದ ಲೋಕಸಭೆ ಚುನಾವಣೆ ವೇಳೆ ಹಣದ ಹಂಚಿಕೆ ಬಗ್ಗೆ ಆಪ್ತರ ಜೊತೆ ಮಾತನಾಡಿದ್ದ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದರೂ, ಆ ಬಗ್ಗೆಯೂ ಎಸ್‌ಐಟಿ ರಚಿಸಿ ತನಿಖೆ ಮಾಡುವುದಿರಲಿ, ಸರ್ಕಾರ ಏಕೆ ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಪ್ರಶ್ನಿಸಿದರು.
ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಮುನಿರತ್ನ ಸದನದಲ್ಲಿ ಕೂರಬಾರದು ಎದು ಮಾತನಾಡಿದ್ದಾರೆ. ಹೊರಗೆ ಕಳಿಸದಿದ್ದರೆ ಧರಣಿ ಮಾಡುವೆ ಎಂದಿದ್ದಾರೆ. ಮುನಿರತ್ನ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಅಂತೆಯೇ ಆಡಳಿತ ಪಕ್ಷದ ಶಾಸಕರು ಆಡಿರುವ ಮಾತಿನ ಬಗ್ಗೆ ಏಕೆ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ಕೇಳಿದರು. ಶಿವಲಿಂಗೇಗೌಡ ಅವರು, ಮತದಾರರಿಗೆ ಕೋಟಿ ಕೋಟಿ ಹಣ ಹಂಚಿಕೆ ಬಗ್ಗೆ ಮಾತನಾಡುವ ವೇಳೆ ಸಿಎ, ಡಿಸಿಎಂ ಹೆಸರನ್ನೂ ಪ್ರಸ್ತಾಪ ಮಾಡಿದ್ದಾರೆ. ಕೂಡಲೇ ಎಸ್‌ಐಟಿ ರಚಿಸಿ ಕೆ.ಎಂ.ಶಿವಲಿಂಗೇಗೌಡ ಆಡಿಯೋ ಪ್ರಕರಣವನ್ನೂ ತನಿಖೆಗೆ ಒಪ್ಪಿಸಬೇಕಲ್ಲವೇ ಎಂದು ಆಗ್ರಹಿಸಿದರು.ನಾನು ಚುನಾವಣಾ ಆಯೋಗ ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದೇನೆ. ಆದರೂ ಕೆಎಂಶಿ ವಿರುದ್ಧ ಇಲ್ಲಿಯ ತನಕ ಕ್ರಮ ಕೈಗೊಂಡಿಲ್ಲ ಏಕೆ.
ಎಸ್‌ಐಟಿಯನ್ನು ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸಿ, ನಿಮ್ಮ ಮನೆ ಜೀತಕ್ಕೆ ಬಳಸಿಕೊಳ್ಳುತ್ತಿದ್ದಿರಾ, ನೀವೇನೂ ಸಾಚಾಗಳಾ ಎಂದು ವಾಗ್ದಾಳಿ ನಡೆಸಿದರು.
ರಾಮನಗರ ಶಾಸಕನ ಅಶ್ಲೀಲ ವಿಡಿಯೋ ಪ್ರಕರಣ ಏನಾಯ್ತು, ನೀವು ಮಾಡ ಬಾರದ್ದನ್ನು ಮಾಡಿದರೂ ಏನೂ ಶಿಕ್ಷೆ ಇಲ್ಲವೇ ಎಂದರು.
ಹೊಳೆನರಸೀಪುರ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಕಾರ್ಯಒತ್ತಡದ ಮಾತನಾಡಿದರೆ ಅವರಿಗೆ ನೋಟಿಸ್ ಕೊಡುತ್ತೀರಿ,ವಾಲ್ಮೀಕಿ ನಿಗಮ ಹಗರಣದಲ್ಲಿ ಅಧಿಕಾರಿಗಳು ಸೂಸೈಡ್ ಮಾಡಿಕೊಂಡಿದ್ದಾರೆ. ಇನ್ನು ಎಷ್ಟು ಜನರ ಬಲಿ ಪಡೆಯುತ್ತೀರಿ ಎಂದು ಕೇಳಿದ ಅವರು, ಕೂಡಲೇ ಶಿವಲಿಂಗೇಗೌಡ ಆಡಿಯೋ ಬಗ್ಗೆ ಶೀಘ್ರ ತನಿಖೆ ನಡೆಸಿ ಎಂದು ಆಗ್ರಹಿಸಿದರು.