ಹಾಸನ:ವಿವಿಧ ಬೇಡಿಕೆ ಈಡೇಕೆಗೆ ಆಗ್ರಹಿಸಿ ಇಂದು ಜಿಲ್ಲಾ ಕೇಂದ್ರಗಳಲ್ಲಿ ಅಂಗನವಾಡಿ ಕೇಂದ್ರ ಬಂದ್ ಮಾಡಿ ಅಹೋರಾತ್ರಿ ಪ್ರತಿಭಟನೆ ಹಾಗೂ ಡಿ.೧೮ ರಂದು ಬೆಳಗಾವಿ ಅಧಿವೇಶನ ಬಳಿ ಅಹೋರಾತ್ರಿ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ ಮಾಡಲು ಕರ್ನಾಟಕ ರಾಜ್ಯ ಅಂಗನವಾಗಿ ನೌಕರರ ಸಂಘ ನಿರ್ಧರಿಸಿದೆ.
ಈ ಸಂಬಂಧ ನಗರದಲ್ಲಿಂದು ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತೆಯರು, ಅಧಿವೇಶನದಲ್ಲಿ ನಮ್ಮ ಬೇಡಿಕೆ ಬಗ್ಗೆ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು. ಹೇಮಾವತಿ ಪ್ರತಿಮೆ ಬಳಿಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಕೆಲಹೊತ್ತು ಧರಣಿ ನಡೆಸಿದರು. ಗುಜರಾತ್ ಹೈಕೊರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ ೩ ಮತ್ತು ೪ ಎಂದು ಪರಿಗಣಿಸಿ ಕಾಯಂ ಮಾಡಬೇಕು, ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿ ಮತ್ತು ಎಲ್ಲರಿಗೂ ಅನ್ವಯಿಸಿ. ೨೦೧೮ ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲ, ಆದ್ದರಿಂದ ಕೇಂದ್ರ ೨೬ ಸಾವಿರ ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.೨೦೨೩ರ ವಿಧಾನಸಭಾ ಚುನಾವಣೆ ವೇಳೆ ಘೋಷಣೆ ಮಾಡಿದ ೧೫ ಸಾವಿರ ಗೌರವಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ ಇಡಿಗಂಟು ಅಥವಾ ಎನ್‌ಪಿಎಸ್ ಹಣ ಹಾಗೂ ೧೦ ಸಾವಿರ ಮಾಸಿಕ ಪಿಂಚಣಿ ನೀಡಬೇಕು. ವಿವಿಧೆಡೆ ಆರಂಭಿಸಿರುವ ಎಲ್‌ಕೆಜಿ-ಯುಕೆಜಿ ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಲ್ಲೇ ಎಲ್‌ಕೆಜಿ-ಯುಕೆಜಿ ಆರಂಭಿಸಬೇಕು.
ಹಾಗೆಯೇ ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಬೇಕು. ಮುಖ್ಯವಾಗಿ ಎಲ್ಲಾ ಚುನಾವಣಾ ಕಾರ್ಯಗಳಿಂದ ನಮ್ಮನ್ನು ಮುಕ್ತಗೊಳಿಸಬೇಕು. ಕೂಡಲೇ ಸಾಮೂಹಿಕ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಅಂಗನವಾಡಿ ಪೌಷ್ಟಿಕ ಆಹಾರಕ್ಕೆ ಜಿಎಸ್‌ಟಿ ಹಾಕಬಾರದು. ಡಿಸಿ ಅಧ್ಯಕ್ಷತೆಯಲ್ಲೇ ಮೆನು ಅಂತಿಮಗೊಳ್ಳಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ನೀಡಬೇಕು. ಖಾಲಿ ಹುದ್ದೆ ೩ ತಿಂಗಳೊಳಗೆ ನೇಮಿಸಬೇಕು.ಇಲ್ಲದಿದ್ದರೆ ಅಧಿಕಾವಧಿ ವೇತನ ಕೊಡಬೇಕು ಎಂದು ಒತ್ತಾಯಿಸಿದರು.
ಖಾಲಿ ಇರುವ ಮತ್ತು ಹೊಸ ಕೇಂದ್ರಗಳಿಗೆ ಸರ್ಕಾರಿ ಆದೇಶದಂತೆ ಮುಂಬಡ್ತಿ, ವರ್ಗಾವಣೆ ನೀಡಿ ನಂತರ ಹೊಸ ಆಯ್ಕೆ ಮಾಡಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಅವಕಾಶದಿಂದ ವಂಚಿಸಬಾರದು. ಮುಂಗಡವಾಗಿ ಕರೆನ್ಸಿ ಹಣ, ಕೋಳಿ ಮೊಟ್ಟೆ, ಬಾಡಿಗೆ, ಗ್ಯಾಸ್, ತರಕಾರಿ, ಕಾಂಟೆಜಿನ್ಸಿ ಬಿಲ್‌ಗಳನ್ನು ಹಾಕದೆ ಫಲಿತಾಂಶ ಕೇಳಬಾರದು. ಅಂಗನವಾಡಿ ಕೇಂದ್ರದ ಚಟುವಟಿಕೆ ಬಗ್ಗೆ ಮೊಬೈಲ್‌ನಲ್ಲಿ ದಾಖಲೆ ನಿರ್ವಹಣೆ ಮಾಡಿದರೆ, ಪುಸ್ತಕದಲ್ಲಿ ಬರೆಯುವುದನ್ನು ನಿಲ್ಲಿಸಬೇಕು. ಪೌಷ್ಟಿಕ ಆಹಾರ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಹಕ್ಕಾಗಬೇಕು. ಐಸಿಡಿಎಸ್ ಯೋಜನೆಯನ್ನು ಕಾಯ್ದೆಯಾಗಿಸಬೇಕು ಎಂದು ಮನವಿ ಸಲ್ಲಿಸಿದರು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ ೫೦ ವರ್ಷ ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ, ಸಂವಿಧಾನ ಬದ್ಧ ಕರ್ತವ್ಯ, ೨೦೧೩ರ ಆಹಾರ ಭದ್ರತಾ ಕಾಯ್ದೆ, ೨೦೦೯ರ ಕಡ್ಡಾಯ ಶಿಕ್ಷಣ ಕಾಯ್ದೆ ಕರ್ತವ್ಯಗಳನ್ನು ಶಾಸನ ಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮೂಲಕ ನಾವು ಜಾರಿ ಮಾಡುತ್ತಿದ್ದೇವೆ. ಹಾಗಾಗಿ ನಮ್ಮ ಎಲ್ಲ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷೆ ಎಂ.ಬಿ ಪುಷ್ಪ, ಗೌರವಾಧ್ಯಕ್ಷೆ ಇಂದ್ರಮ್ಮ, ಪ್ರಧಾನ ಕಾರ್ಯದರ್ಶಿ ಜಿ.ಪಿ ಶೈಲಜಾ ಮಂಜುಳಾ, ಉಪಾಧ್ಯಕ್ಷರಾದ ಶಾರದಾ, ಕಾಮಾಕ್ಷಿರಾಜು, ಮೀನಾಕ್ಷಿ, ಕಾಯದರ್ಶಿಗಳಾದ ಜಯಂತಿ, ಲಲಿತಾ, ವೀಣಾ ಸುಮಿತ್ರ ಹಾಗೂ ಜಿಲ್ಲೆಯ ವಿವಿಧ ಘಟಕಗಳವರು ಹಾಜರಿದ್ದರು.