ಸುಳ್ಳು ಆರೋಪ: ಜಿಪಂ ಅಧ್ಯಕ್ಷೆ ಕ್ಷಮೆಯಾಚನೆಗೆ ಆಗ್ರಹ


ಜೆಡಿಎಸ್‌ ಸದಸ್ಯರು ವಿಶೇಷ ಸಭೆಗೆ ಗೈರು ಹಾಜರಾಗಿ ಜಿಲ್ಲೆಯ ಅಭಿವೃದಿಟಛಿಗೆ ಅಡ್ಡಗಾಲಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವ ಜಿಪಂ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಅವರು ಬಹಿರಂಗವಾಗಿ ಜೆಡಿಎಸ್‌ ಸದಸ್ಯರ ಕ್ಷಮೆ ಯಾಚಿಸಬೇಕು ಎಂದು ಜಿಪಂ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರು ಕೋವಿಡ್‌ 19 ನಿಯಂತ್ರಣದ ಚರ್ಚೆಗೆ ಅಧ್ಯಕ್ಷರು ಮೇ 26 ರಂದು ವಿಶೇಷ ಸಭೆ ಕರೆದಿದ್ದರು. ಆ ಸಭೆಯ ಅಜೆಂಡಾದಲ್ಲಿ ಕೋವಿಡ್‌ 19 ವಿಷಯ ಬಿಟ್ಟು ಅನುದಾನದ ಖರ್ಚಿನ ಸಂಬಂಧದ ವಿಷಯವೇ ಇರಲಿಲ್ಲ. ಆ ಸಭೆಗೆ ಜೆಡಿಎಸ್‌ ಸದಸ್ಯರು ಹೋಗಿರಲಿಲ್ಲ. ಹಾಗಾಗಿ ಕೋರಂ ಕೊರತೆ ಉಂಟಾಗಿತ್ತು.

ಸಭೆಯ ನಂತರ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಕೋವಿಡ್‌ 19 ನಿಯಂತ್ರಣ ಕ್ರಮಗಳಿಗಾಗಿ ಸರ್ಕಾರದಿಂದ 6.20 ಕೋಟಿ ರೂ. ಬಿಡುಗಡೆಯಾಗಿದ್ದು, ಆ ಬಗ್ಗೆ ಚರ್ಚೆಗೆ ಜೆಡಿಎಸ್‌ ಸದಸ್ಯರು ಗೈರಾಗಿ ಅನುದಾನ ವ್ಯರ್ಥವಾಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿ  ಸಿದ್ದರು.

ಮೇ 13ರಂದೇ ಸರ್ಕಾರದಿಂದ 6.20 ಕೋಟಿ ರೂ. ಬಿಡುಗಡೆಯಾಗಿದ್ದರೂ ವಿಶೇಷ ಸಭೆಯ ಅಜೆಂಡಾದಲ್ಲಿ ಆ ವಿಷಯವನ್ನು ನಮೂದಿಸದೇ ಲೋಪವೆಸಗಿ ಜೆಡಿಎಸ್‌ ಸದಸ್ಯರ ಮೇಲೆ ಅಧ್ಯಕ್ಷ ಶ್ವೇತಾ ಅವರು ಆರೋಪ ಮಾಡಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.

ಕಳೆದ ನವೆಂಬರ್‌ನಿಂದ ಈವರೆಗೂ ಜಿಪಂ ಸಾಮಾನ್ಯ ಸಭೆಯನ್ನು ಕರೆದಿಲ್ಲ. ಇನ್ನೊಂದು ವಾರದಲ್ಲಿ ಸಾಮಾನ್ಯ ಸಭೆ ಕರೆಯುವಂತೆ ಅಧ್ಯಕ್ಷರು ಹಾಗೂ ಜಿಪಂ ಸಿಇಒಗೆ ಜೆಡಿಎಸ್‌ನ ಎಲ್ಲ ಸದಸ್ಯರೂ ಮನವಿ ಸಲ್ಲಿಸಿದ್ದೇವೆ ಎಂದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.

ಶಾಸಕರ ವಿರುದ್ಧ ಆಕ್ರೋಶ: ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಅವರು ಹಾಸನ ತಾಲೂಕಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಕೆಲಸ ಮಾಡಿದವರಿಗೆ ಬಿಲ್‌ ಮಾಡಬೇಡಿ. ಬಿಲ್‌ ಪಾವತಿಗೆ ಕೇಳುವವರನ್ನು ನನ್ನ ಬಳಿ ಕಳುಹಿಸಿ ಎಂದು ತಾಪಂ ಒಗೆ ಮೌಖೀಕ ಸೂಚನೆ ನೀಡಿದ್ದಾರೆ.

ಹಾಗಾಗಿ ಸುಮಾರು 3 ರಿಂದ 4 ಕೋಟಿ ರೂ. ನರೇಗಾ ಬಿಲ್‌ ಬಾಕಿ ಇದೆ. ಬಿಲ್‌ಗಾಗಿ ಗ್ರಾಪಂ ಸದಸ್ಯರು ಶಾಸಕರ ಬಳಿ ಹೋದರೆ ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದ್ದಾರೆ. ತಕ್ಷಣ ಬಿಲ್‌ ಪಾವತಿಸದಿದ್ದರೆ ಶಾಸಕರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Post a Comment

Previous Post Next Post