ಯಾವೊಬ್ಬ ವಿದ್ಯಾರ್ಥಿಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿ ಪರೀಕ್ಷೆಯಿಂದ ವಂಚಿತರಾಗಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ್‍ಕುಮಾರ್ ಅವರು ಹೇಳಿದರು.
ಶುಕ್ರವಾರ ನಗರದ ಆಡಳಿತ ತರಬೇತಿ ಸಂಸ್ಥೆಯ ಹೇಮಾವತಿ ಸಭಾಂಗಣದಲ್ಲಿ ಎಸ್ಎಸ್ಎಲ್‍ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತು ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲೆಗಳ ಶಿಕ್ಷಣ ಇಲಾಖೆಯ ಡಿ.ಡಿ.ಪಿ.ಐ ಮತ್ತು ಬಿ.ಇ.ಓಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯಿಂದ ಬಹಳ ವಿಶೇಷವಾದ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಈ ಕುರಿತು ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಮೂಲಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದರು.
ಜೂನ್ 25 ರಿಂದ ನಡೆಯಲಿರುವ ಪರೀಕ್ಷೆ ಸಂಬಂಧ ಸರ್ಕಾರದಿಂದ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಆಯಾ ಜಿಲ್ಲಾವ್ಯಾಪ್ತಿಯ ಅಧಿಕಾರಿಗಳು ಕಾರ್ಯಸೂಚಿಯ ಪ್ರಕಾರ ಯಾವುದೇ ತೊಂದರೆ ಉಂಟಾಗದಂತೆ ಪರೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆಯುವ ಪರೀಕ್ಷಾ ಕೇಂದ್ರಗಳಲ್ಲಿ ಎರಡು ಸ್ಕ್ರೀನಿಂಗ್ ಟೇಬಲ್ ಅಳವಡಿಸಲು ಸೂಚಿಸಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಟೇಬಲ್ ಅಳವಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಪರೀಕ್ಷೆಯು ನನ್ನನ್ನು ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅತ್ಯಂತ ಸವಾಲಿನ ಪರೀಕ್ಷೆಯಾಗಿದೆ. ಈ ಸವಾಲಿನ ನಡುವೆ ನಾವು ನಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಒಂದು ಅವಕಾಶ ಎಂದು ಭಾವಿಸಿ ಕಾರ್ಯೋನ್ಮುಖರಾಗೋಣ. ಅಲ್ಲದೆ ನಮ್ಮ ಇಲಾಖೆಯ ಅಧಿಕಾರಿಗಳು ಉತ್ಸಾಹದಿಂದಿದ್ದು, ಪರೀಕ್ಷೆಯನ್ನು ಗೆಲ್ಲುವ ವಿಶ್ವಾಸವಿದೆ ಎಂದರು.
ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳ ಒಳಗೆ ಸುರಕ್ಷತೆ ಕಾಯುವ ರೀತಿಯಲ್ಲಿ ಪರೀಕ್ಷೆಗೂ ಮುನ್ನ ಹಾಗೂ ನಂತರ ಶಾಲಾ ಆವರಣದಲ್ಲಿ ಸೇರುವ ಪೆÇೀಷಕರು ಹಾಗೂ ವಿದ್ಯಾರ್ಥಿಗಳನ್ನು ದೈಹಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು ಎಂದು ಹೇಳಿದರು.
ಪರೀಕ್ಷೆಯ ಅವಧಿಯಲ್ಲಿ ಶೌಚಾಲಯದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರ ಜವಾಬ್ದಾರಿಯನ್ನು ಪ್ರತ್ಯೇಕ ಸಿಬ್ಬಂದಿ ತೆಗೆದುಕೊಳ್ಳಬೇಕು ಕುಡಿಯುವ ನೀರನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಆಯಾ ಜಿಲ್ಲೆಯ ಡಿಡಿಪಿಐಗಳು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮೈಸೂರು ಜಿಲ್ಲೆಯ ಡಿಡಿಪಿಐ ಡಾ.ಪಾಂಡುರಂಗ, ಮಂಡ್ಯ ಡಿಡಿಪಿಐ ರಘನಂದನ್, ಕೊಡಗು ಡಿಡಿಪಿಐ ಪಿ.ಎಸ್.ಮಚ್ಚಾಡೊ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
Tags
ರಾಜ್ಯ