ಹಾಸನ,ಮೇ.30:- ಉದ್ಯೋಗ ಖಾತರಿ ಯೋಜನೆಯಡಿ ಪ್ರಾರಂಭಿಸಿರುವ ಕಾಮಗಾರಿಗಳನ್ನು ವಾರ್ಷಿಕ ಗುರಿಗೆ ಅನುಗುಣವಾಗಿ ಜೂನ್ ಮಾಹೆ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಮಳೆಗಾಲ ಪ್ರಾರಂಭವಾಗಿದ್ದು ಕೆರೆ ಕಾಮಗಾರಿಗಳನ್ನು ಹೊರತು ಪಡಿಸಿ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳ ಕೆಲಸ ಕೈಗೊಳ್ಳಿ ಎಂದರು.
ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ವಂಚಿತರಾದ ಗ್ರಾಮಸ್ಥರಿಗೆ ಕೆಲಸ ನೀಡಿ ಎಂದರಲ್ಲದೇ, ಸರ್ಕಾರದ ಮಾರ್ಗಸೂಚಿ ಅನುಸರಿಸುವುದರ ಜೊತೆಗೆ ಸ್ಥಳೀಯವಾಗಿ ತಲೆದೂರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊಂದಾಣಿಕೆ ಮಾಡಿಕೊಂಡು ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಪ್ರಜ್ವಲ್ ರೇವಣ್ಣ ಅವರು ಪಿ.ಡಿ.ಓ. ಗಳಿಗೆ ಸೂಚಿಸಿದರು.
ಕಾಮಗಾರಿಗಳಿಗೆ ಸಂಬಂಧಿಸಿದ ಎನ್.ಎಂ.ಆರ್. ಸಮಸ್ಯೆಗಳಿದ್ದರೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಿ ಎಂದರಲ್ಲದೇ, ಕ್ರಿಯಾ ಯೋಜನೆಯ ಮೂಲಕ ಮಣ್ಣು ರಸ್ತೆಗಳಿರುವ ಕಡೆ ಕಾಂಕ್ರಿಟ್ ರಸ್ತೆ ಮಾಡುವ ಬದಲು ಗ್ರಾವೆಲ್ ರಸ್ತೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಗ್ರಾಮ ಪಂಚಾಯ್ತಿಗೆ ಒಳಪಡುವ ಕಾಮಗಾರಿಗಳಿಗೆ ತಕ್ಕಂತೆ ಕ್ರಿಯಾ ಯೋಜನೆ ಮಾಡಲಾಗಿದ್ದು, ಯಾವುದಾದರು ಕೆರೆಗಳ ನೀರು ಖಾಲಿ ಇದ್ದರೆ ಹೂಳೆತ್ತುವ ಕಾರ್ಯ ಕೈಗೊಳ್ಳಿ ಎಂದು ಸಂಬಂಧಿಸಿದ ಗ್ರಾಮ ಪಂಚಾಯ್ತಿ ಅಧಿಕಾರಿಗೆ ತಿಳಿಸಿದರು.
ಗ್ರಾಮ ಪಂಚಾಯ್ತಿಗೆ ಒಳಪಡುವ ಕೆರೆಗಳು ತುಂಬಿದ್ದರೆ ಅದನ್ನು ಹೊರತು ಪಡಿಸಿ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ, ಕೃಷಿಹೊಂಡ, ನೀರು ಕಾಲುವೆ ನಿರ್ಮಾಣದ ಕೆಲಸ ಕೈಗೊಳ್ಳುವಂತೆ ಪಿ.ಡಿ.ಓ. ಗಳಿಗೆ ನಿರ್ದೇಶಿಸಿದರು.
ಕೆರೆ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಮಗಾರಿಗಳನ್ನು ಪ್ರಾರಂಭಿಸಿ ಯಾವುದಾದರು ಅಡಚಣೆಗಳಿದ್ದರೆ ಮೇಲಿನ ಅಧಿಕಾರಿಗಳಿಗೆ ತಿಳಿಸುವಂತೆ ಬಿ.ಎ. ಪರಮೇಶ್ ಅವರು ಪಿ.ಡಿ.ಓ. ಗಳಿಗೆ ಹೇಳಿದರು.
ಎಲ್ಲಾ ಗ್ರಾಮ ಪಂಚಾಯ್ತಿ ಪಿ.ಡಿ.ಓ. ಗಳು ಉದ್ಯೋಗ ಖಾತರಿ ಯೋಜನೆಯಯಡಿ ಹೆಚ್ಚಿನ ಕೆಲಸ ಮಾಡುವ ಮೂಲಕ ವಾರ್ಷಿಕ ನಿಗಧಿತ ಗುರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅವರು ತಿಳಿಸಿದರು.
ಕೃಷಿ ಇಲಾಖೆ, ತೋಟಗಾರಿಕೆಇಲಾಖೆ, ರೇಷ್ಮೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳು ಕ್ರಿಯಾ ಯೋಜನೆಯ ಮೂಲಕ ಪ್ರಾಂಭಿಸಿರುವ ಕೆಲಸಗಳನ್ನು ಜೂನ್ ಮಾಹೆ ಅಂತ್ಯದೊಳಗೆ ನಿಗಧಿತ ಗುರಿ ಆಧಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಹೆಚ್.ಪಿ ಸ್ವರೂಪ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಎಸ್.ಸಿ. ಮಹೇಶ್, ಚಂದ್ರಶೇಖರ್ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
Tags
ಹಾಸನ