2025 ರೊಳಗೆ ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿಯ ಮೇಲ್ವಿಚಾರಕ ಕೆ.ವಿನಯ್ ತಿಳಿಸಿದರು.
ತಾಲ್ಲೂಕಿನ ಕೊಡಿಹಳ್ಳಿ ಕೊಪ್ಪಲು ಪ್ರಾ.ಆ.ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಸೊಳ್ಳೆಗಳು ಹೇಗೆ ಖಾಯಿಲೆಗಳನ್ನು ಹರಡುತ್ತವೆ? ಇವುಗಳನ್ನು ನಿಯಂತ್ರಿಸುವ ಬಗೆ ಹೇಗೆ ಎಂಬುದನ್ನು ವಿವರವಾಗಿ ತಿಳಿಸಿ ಯಾವುದೇ ರೊಗಗಳು ನಿಯಂತ್ರಣ ಮಾಡಬೇಕಾದರೆ ಸಮುದಾಯದ ಸಹಕಾರ, ಶಿಕ್ಷಣ ಇಲಾಖೆ ಹಾಗು ಗ್ರಾಮ ಪಂಚಾಯಿತಿಯ ಸಹಕಾರ ಅತಿಮುಖ್ಯ ಎಂದರು.
ಗ್ರಾಮ ಪಂಚಾಯಿತಿಯ ಪ್ರಥಮ ದರ್ಜೆಸಹಾಯಕ ರಾಮಕೃಷ್ಣ ಮಾತನಾಡಿ ಕೊರೊನಾ ವೈರಸ್ ಬೇರೆ ದೇಶದಿಂದ ಬಂದರೂ ಸಹ ಇದರ ಬಗ್ಗೆ ಮಾಹಿತಿಯಿರುವಂತೆ ಸೊಳ್ಳೆಗಳಿಂದ ನಾವು ಯಾವ ರೀತಿ ಬಚಾವ್ ಆಗಬೇಕು ಎಂಬುದನ್ನು ಅರಿತು ಮುಂಜಾಗ್ರತಾ ಕ್ರಮವಾಗಿ ಮನೆ ಮುಂದೆ ಸ್ವಚ್ಚತೆ ಕಾಪಾಡಿಕೊಳ್ಳುವುದು, ಮೈತುಂಬಾ ಬಟ್ಟೆ ಧರಿಸುವುದು ಒಳ್ಳೆಯದು. ಪಂಚಾಯಿತಿವತಿಯಿಂದ ಶುದ್ಧ ಕುಡಿಯು ನೀರನ್ನು ಒದಗಿಸುವುದರ ಜೊತೆಗೆ ಸ್ವಚ್ಚತೆಗೆ ಹೆಚ್ಚು ಆಧ್ಯತೆ ಕೊಡಲಾಗುತ್ತಿದೆ. ಕೆರೆ ಕಟ್ಟೆಗಳಿಗೆ ಗಪ್ಪಿ, ಗ್ಯಾಂಬೋಸಿಯಾ ಲಾರ್ವಾಹಾರಿ ಮೀನುಗಳನ್ನು ಬಿಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸುತ್ತಾ ಕೋವಿಡ್-19 ವಿರುದ್ದ ಹೋರಾಡುತ್ತಿರುವ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೂ ಹಾಗು ವಿವಿಧ ಇಲಾಖೆಯವರಿಗೂ ಸಹ ಅಭಿನಂದನೆ ತಿಳಿಸಿದರು.
ಶಿಕ್ಷಣ ಇಲಾಖೆಯ ಶಿಕ್ಷಕ ಶಿವಕುಮಾರ್ ಮಾತನಾಡಿ ಯಾವುದೇ ಖಾಯಿಲೆ ಹರಡುವುದಕ್ಕಿಂತ ಮುಂಚೆ ಆ ಖಾಯಿಲೆ ಹರಡದಂತೆ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ವೈಯಕ್ತಿಕ ಜಾಗೃತಿ ವಹಿಸುವುದರ ಜೊತೆಗೆ ನಮ್ಮ ಸುಮುದಾಯ, ನಮ್ಮ ಕುಟುಂಬ ಹಾಗು ವಿದ್ಯಾರ್ಥಿಗಳಲ್ಲಿಯೂ ಜಾಗೃತಿ ಮೂಡಿಸಿ ಸಹಕರಿಸೋಣ ಎಂದರು.
ಆಸ್ಪತ್ರೆಯ ವೈದ್ಯೆ ಡಾ.ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸೋಂಕಿತ ಸೊಳ್ಳೆಗಳು ಆರೊಗ್ಯವಂತ ಮನುಷ್ಯರನ್ನು ಕಚ್ಚಿದಾಗ ಮಲೇರಿಯಾ ರೊಗವು ಬರುತ್ತದೆ. ಸೊಳ್ಳೆಗಳು ಕಚ್ಚಿ ಒಂದು ವಾರದನಂತರ ಜ್ವರ ಬರುವುದು, ಚಳಿ, ಮೈನಡುಕ, ಬೆವರುವುದು, ಸುಸ್ತಾಗುವುದು, ಬಿಟ್ಟು, ಬಿಟ್ಟು ಜ್ವರ ಕಾಣಿಸಿಕೊಳ್ಳುತ್ತದೆ ಎಂದು ರೋಗಲಕ್ಷಣಗಳ ಬಗ್ಗೆ ವಿವರವಾಗಿ ತಿಳಿಸುತ್ತಾ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸಿ ದೃಢಪಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದರು.
ಹಳೆಕೋಟೆಯ ಹಿರಿಯ ಆರೋಗ್ಯ ಸಹಾಯಕ ಆರ್.ಬಿ.ಪುಟ್ಟೇಗೌಡ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಲಕ್ಷ್ಮಿಕಾಂತ್ ಸ್ವಾಗತಿಸಿದರು. ಕಿ.ಮ.ಆ.ಸಹಾಯಕಿ ಮೇಘನಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ವಿಶಾಲಮ್ಮ, ಶಿಕ್ಷಕಿಯರಾದ ಶೃತಿ, ಗ್ರೂಪ್ ಡಿ.ನೌಕರರಾದ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Tags
ಹೊಳೆನರಸೀಪುರ