ಹಾಸನ ತಾಲ್ಲೂಕಿನ ಸಂತೇಕೊಪ್ಪಲು ಗ್ರಾಮದ ಬೃಹತ್ ಐತಿಹಾಸಿಕ ಕಲ್ಯಾಣಿಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಲ್ಯಾಣಿಯೊಂದನ್ನು ನರೇಗಾ ಯೋಜನೆಯಡಿ, ಹೂಳೆತ್ತಿ ಪುನಶ್ಚೇತನಗೊಳಿಸುವ ಕೆಲಸಕ್ಕೆ ಇದೇ ಮೇ 30 ಕ್ಕೆ ಚಾಲನೆ ನೀಡಲಾಗಿತ್ತು. ಹಾಸನ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಯಶವಂತ್, ಸಂತೆಕೊಪ್ಪಲು ಪಿಡಿಓ ಚಂದ್ರಕಲಾ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್‌ರವರ ಮುತುವರ್ಜಿಯಿಂದ ಈ ಕೆಲಸಕ್ಕೆ ಚಾಲನೆ ಸಿಕ್ಕಿತ್ತು. ಜಾಬ್‌ಕಾರ್ಡ್ ಹೊಂದಿರುವ ಇಪ್ಪತ್ತು ಶ್ರಮದಾನಿಗಳು ಕೆಲಸದಲ್ಲಿ ತೊಡಗಿದ್ದರು.
ಇದೇ ಕಲ್ಯಾಣಿಯ ಪುನಶ್ಚೇತನವನ್ನು ಹಾಸನದ ಹಸಿರುಭೂಮಿ ಪ್ರತಿಷ್ಠಾನದ ವತಿಯಿಂದ ಎರಡು ವರ್ಷಗಳ ಹಿಂದೆ ಆಗಿನ ಸಂಘಟನಾ ಕಾರ್ಯದರ್ಶಿಗಳಾಗಿದ್ದ ತಿಮ್ಮೇಶ್‌ಪ್ರಭು ಅವರ ಆಯೋಜನೆಯ ಮೇರೆಗೆ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ.ಎಚ್.ಎಲ್.ನಾಗರಾಜ್‌ರವರ ನೇತೃತ್ವದಲ್ಲಿ ನಾಲ್ಕು ಭಾನುವಾರಗಳು ಶ್ರಮದಾನ ಮಾಡಲಾಗಿತ್ತು. ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಹಸಿರುಭೂಮಿ ಬಳಗದವರು ಶ್ರಮದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸುಮಾರು 20 ಗಂಟೆಗಳ ಕಾಲ ಕೆಲಸ ಮಾಡಿ ಹೂಳು ತೆಗೆಯಲಾಗಿತ್ತು. ಹೂಳು ಹೆಚ್ಚಾಗಿದ್ದ ಕಾರಣ ಮತ್ತು ಕಲ್ಯಾಣಿಯು ಬೃಹತ್ ಪ್ರಮಾಣದ್ದಾಗಿದ್ದು, ಆಳ ಹೆಚ್ಚಾಗಿದ್ದರಿಂದ ಕೆಲಸವನ್ನು ಮುಗಿಸುವುದು ಅಸಾಧ್ಯವಾಗಿತ್ತು.
ಕಲ್ಯಾಣಿಗೆ ಮಳೆನೀರು ಹರಿದು ಬರುವ ದಾರಿಗಳು ಇಲ್ಲವಾದ್ದರಿಂದ ಈಗ್ಗೆ ಮೂರು ತಿಂಗಳ ಹಿಂದೆ ಅದಕ್ಕೆ ಕೆಲವೇ ಮೀಟರ್‌ಗಳ ಅಂತರದಲ್ಲಿ ಮಳೆ ನೀರಿನ ಸಂಗ್ರಹಕ್ಕಾಗಿ ಚೆಕ್‌ಡ್ಯಾಂ ನಿರ್ಮಿಸಲಾಗಿದ್ದು, ಈ ಬಾರಿ ಬಿದ್ದಿರುವ ಎರಡು ಮೂರು ದೊಡ್ಡ ಮಳೆಗೇ ಅದರಲ್ಲಿ ಸ್ವಲ್ಪ ನೀರು ತುಂಬಿತ್ತು. ಸುತ್ತಲಿನ ಕೊಳವೆ ಬಾವಿಗಳಿಗೆ ಜೀವ ಬಂದಿತ್ತು.
ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಹಸಿರುಭೂಮಿ ಪ್ರತಿಷ್ಠಾನದ ಅಪ್ಪಾಜಿಗೌಡ, ಸುಬ್ಬಸ್ವಾಮಿ, ರೂಪ ಹಾಸನ, ಪುಟ್ಟಯ್ಯ, ಚಿನ್ನೇನಹಳ್ಳಿ ಸ್ವಾಮಿ, ತಿಮ್ಮೇಶ್ ಪ್ರಭು, ಸ್ಥಳೀಯ ಆರೋಗ್ಯ ನಿರೀಕ್ಷಕರಾರ ಅಪ್ಪಾಜಿಯವರು ಕಲ್ಯಾಣಿಯ ಪುನಶ್ಚೇತನಕ್ಕೆ ಹಲವು ಸಲಹೆಗಳನ್ನು ನೀಡಿದ್ದರು.
ಮಳೆ ನೀರಿನೊಂದಿಗೆ ಮಣ್ಣು ನೇರವಾಗಿ ಒಳ ನುಗ್ಗದಂತೆ ಎರಡು ಅಡಿ ಗೋಡೆ ಕಟ್ಟಲು ಸೂಚಿಸಿದ್ದರು. ಕಲ್ಯಾಣಿಯ ಒಳಭಾಗದಲ್ಲಿ ಹೂಳೆತ್ತುವಾಗ ಅಂತರ್ಜಲದ ಒರತೆ ಇರುವ ಕಡೆ ಜಲ ಚಿಲುಮೆ ತಳ (Dead storage) ಮಾಡಲು ಸೂಚಿಸಿದ್ದು ಅದರಲ್ಲಿ ಅಂತರ್ಜಲ ಒಸರಿದೆ. ನಂತರದ ದಿನಗಳಲ್ಲಿ ನಿಧಾನಕ್ಕೆ ಜಲ ತುಂಬಿ ಫಲ ನೀಡಿದೆ!
ಹತ್ತಿರದಲ್ಲೇ ತಡೆಗುಂಡಿ ಮಾಡಿರುವುದರಿಂದ ಈ ಬಾರಿಯ ಮಳೆಗಾಲದಲ್ಲಿ ನೀರು ಪೂರ್ಣ ತುಂಬುವ ವಿಶ್ವಾಸವಿದೆ ಎಂದು ಹಸಿರುಭೂಮಿ ತಂಡ ಸಂತಸ ವ್ಯಕ್ತಪಡಿಸಿದ್ದಾರೆ.
Tags
ಹಾಸನ